ಆಂಧ್ರದಲ್ಲಿ ಪ್ರಧಾನಿ ಮೋದಿಯವರಿಗೆ ಭದ್ರತಾ ಲೋಪ

ಪ್ರಧಾನಿ ನರೇಂದ್ರ ಮೋದಿ ಸದ್ಯ ಆಂಧ್ರ ಪ್ರದೇಶ ಪ್ರವಾಸದಲ್ಲಿದ್ದಾರೆ. ಪ್ರಧಾನಿ ಮೋದಿ ಗನ್ನವರಂ ವಿಮಾನ ನಿಲ್ದಾಣದಿಂದ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂಗೆ ಹೆಲಿಕಾಪ್ಟರ್​ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಭದ್ರತಾ ಲೋಪವೊಂದು ಉಂಟಾಗಿದೆ. ಪ್ರಧಾನಿ ಮೋದಿ ಆಂಧ್ರ ಪ್ರದೇಶ ಭೇಟಿಯನ್ನು ಖಂಡಿಸಿ ಕಾಂಗ್ರೆಸ್​ ನಾಯಕರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಈ ಭದ್ರತಾ ಲೋಪ ಉಂಟಾಗಿದ್ದು ಸ್ಥಳದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣಗೊಂಡಿದೆ.

ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಅವರ 125ನೇ ಜನ್ಮ ದಿನಾಚರಣೆ ಪ್ರಯುಕ್ತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಗನ್ನವರಂನಿಂದ ಭೀಮಾವರಂಗೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಭಾರೀ ಬಿಗಿ ಬಂದೋಬಸ್ತ್​ ಕೂಡ ಕಲ್ಪಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಜೊತೆಯಲ್ಲಿ ಆಂಧ್ರ ಪ್ರದೇಶ ಮುಖ್ಯ ಮಂತ್ರಿ ವೈ.ಎಸ್​ ಜಗನ್​ಮೋಹನ ರೆಡ್ಡಿ ಹಾಗೂ ಕೇಂದ್ರ ಸಚಿವ ಕಿಶನ್​ ರೆಡ್ಡಿ ಕೂಡ ಹೆಲಿಕಾಪ್ಟರ್​ ಮಾರ್ಗವಾಗಿ ಪ್ರಯಾಣಿಸುತ್ತಿದ್ದರು. ಆದರೆ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಸಮೀಪದಲ್ಲಿ ಕಪ್ಪು ಬಣ್ಣದ ಬಲೂನು ಹಾರಾಟ ನಡೆಸಿದೆ.

ಪ್ರಧಾನಿ ನರೇಂದ್ರ ಮೋದಿ ಆಗಮನವನ್ನು ಖಂಡಿಸಿ ಆಂಧ್ರ ಪ್ರದೇಶದ ಸ್ಥಳೀಯ ಕಾಂಗ್ರೆಸ್​ ಕಾರ್ಯಕರ್ತರು ಮೋದಿ ಗೋ ಬ್ಯಾಕ್​ ಎಂಬ ಪ್ರತಿಭಟನೆಯನ್ನು ನಡೆಸುತ್ತಿದ್ದರು. ಈ ಪ್ರತಿಭಟನೆಯ ಭಾಗವಾಗಿ ಕಪ್ಪು ಬಣ್ಣದ ಬಲೂನಿನ ಮೇಲೆ ಮೋದಿ ಗೋ ಬ್ಯಾಕ್​ ಎಂದು ಬರೆಯಲಾದ ಬರಹವನ್ನು ಹಿಡಿದಿದ್ದ ಕಾರ್ಯಕರ್ತರು ಅದನ್ನು ಗಾಳಿಯಲ್ಲಿ ಹಾರಿಸಿದ್ದಾರೆ. ಈ ಬಲೂನು ಪ್ರಧಾನಿ ಮೋದಿಯಿದ್ದ ಹೆಲಿಕಾಪ್ಟರ್​ನ ಸುತ್ತ ಹಾರಾಟ ನಡೆಸಿದ್ದು ಭದ್ರತಾ ಲೋಪಕ್ಕೆ ಕಾರಣವಾಗಿದೆ.

ಪ್ರಧಾನಿಗಳು ಯಾವುದೇ ಕಡೆ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಈ ರೀತಿಯ ಕಾರ್ಯವನ್ನು ನಡೆಸುವುದು ಕಾನೂನು ಬಾಹಿರವಾಗಿರುತ್ತದೆ. ಒಂದು ಸಣ್ಣ ಲೈಟ್​ ಕೂಡ ಪ್ರಧಾನಿಗಳ ಮೇಲೆ ಬಿದ್ದರೂ ಅದು ಕೂಡ ಭದ್ರತಾ ಲೋಪಗಳ ಅಡಿಯಲ್ಲಿಯೇ ಬರುತ್ತದೆ. ಹಾಗೂ ಭದ್ರತಾ ಲೋಪ ಉಂಟಾಗದಂತೆ ನೋಡಿಕೊಳ್ಳುವುದು ಆಯಾ ರಾಜ್ಯದ ಸರ್ಕಾರಗಳ ಸಂಪೂರ್ಣ ಜವಾಬ್ದಾರಿಯಾಗಿದೆ. ಇಷ್ಟೆಲ್ಲ ತಿಳಿದಿದ್ದೂ ಸಹ ಇಷ್ಟು ದೊಡ್ಡ ಮಟ್ಟದ ಭದ್ರತಾ ಲೋಪಕ್ಕೆ ದಾರಿ ಮಾಡಿದ ಆಂಧ್ರ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತವಾಗ್ತಿದೆ.

 
 
 
 
 
 
 
 
 
 
 

Leave a Reply