ಪೋಕ್ಸೋ ಕಾಯ್ದೆಯಡಿ ಮುರುಘಾ ಶ್ರೀ ಅಂದರ್ 

ಚಿತ್ರದುರ್ಗ: ಮುರುಘಾ ಮಠದ ಹಾಸ್ಟೆಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದ ಮೇಲೆ ಚಿತ್ರದುರ್ಗದ ಮುರುಘಾ ಮಠದಲ್ಲಿಯೇ ಮುರುಘಾ ಶ್ರೀ ಅವರನ್ನು ಪೋಕ್ಸೋ ಕಾಯ್ದೆಯಡಿ ಚಿತ್ರದುರ್ಗ ಪೊಲೀಸರು (ಗುರುವಾರ ರಾತ್ರಿ) ಬಂಧಿಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯ ಸಿಪಿಐ ಬಾಲಚಂದ್ರ ನಾಯ್ಕ್‌,  ಮೊಳಕಾಲ್ಮೂರು ಠಾಣೆ ಸಿಪಿಐ ಸತೀಶ್ ಅವರುಗಳು ಮಠದ ಒಳಗೆ ಪ್ರವೇಶಿಸಿ, ಪ್ರಕರಣ ದಾಖಲಾಗಿ 6 ದಿನಗಳ ನಂತರ ಬಂಧನದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. 

ಚಿತ್ರದುರ್ಗದ ಮುರುಘಾ ಮಠದ ಮುರುಘಾ ಶ್ರೀ ವಿರುದ್ಧ ಪೋಕ್ಸೋ ಕಾಯ್ದೆಯಡಿ  ಪ್ರಕರಣ ದಾಖಲಾಗಿ, ಶ್ರೀಗಳ ವಿರುದ್ಧ ಪೊಲೀಸರು ಲುಕ್‌ಔಟ್‌ ನೋಟಿಸ್ ಜಾರಿ ಮಾಡಿದ್ದರ ಬೆನ್ನಿಗೆ ಮುರುಘಾ ಮಠದ ಲೈಂಗಿಕ ಪ್ರಕರಣಗಳ ಹಿನ್ನೆಲೆಯಲ್ಲಿ ಮುರುಘಾ ಶ್ರೀಯನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುರುಘಾಮಠದ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಪೋಕ್ಸೋ ಕೇಸ್‌ನಲ್ಲಿ ಪೊಲೀಸರಿಂದ ಮುರುಘಾಶ್ರೀಗಳ ಅರೆಸ್ಟ್‌ ವಿಚಾರಕ್ಕೆ ಮೈಸೂರಿನ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶು ಮಾಧ್ಯಮ ಜೊತೆ ಮಾತನಾಡಿದ್ದು, ಮುರುಘಾಶ್ರೀ ಕಾವಿಯೊಳಗಿದ್ದ ಬೆಕ್ಕು. ಸಾಕಷ್ಟು ಬಾಲಕಿ ಯರಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದಿದ್ದಾರೆ.

ಪ್ರಕರಣದ ಹಿನ್ನಲೆ : ಆಗಸ್ಟ್‌ 26 ಶುಕ್ರವಾರ ಮುರುಘಾಶ್ರೀಗಳ ವಿರುದ್ಧ ಮೈಸೂರಿನ ನಜರ್‌ಬಾದ್‌ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸಂತ್ರಸ್ತ ಬಾಲಕಿಯರು ಒಡನಾಡಿ ಸಂಸ್ಥೆ ನೆರವು ಪಡೆದು ಕೇಸ್ ದಾಖಲಿಸಿದ್ದರು. ಬಳಿಕ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಕೇಸ್ ವರ್ಗಾವಣೆ ಆಗಿತ್ತು. ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆ ಯಡಿ ಒಂದು ಕೇಸ್ ಜೊತೆಗೆ, ಎಸ್​ಸಿ-ಎಸ್​ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಮತ್ತೊಂದು ಕೇಸ್ ದಾಖಲಾಗಿದೆ. ಓರ್ವ ಸಂತ್ರಸ್ತ ಬಾಲಕಿ ದಲಿತ ಸಮುದಾಯಕ್ಕೆ ಸೇರಿದವರು. ಹೀಗಾಗಿ ಮುರುಘಾಶ್ರೀಗಳ ವಿರುದ್ಧ ಅಟ್ರಾಸಿಟಿ ಕೇಸ್ ಸಹ ದಾಖಲಾಗಿದೆ.

ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ. A-3 ಮಠದ ಉತ್ತರಾಧಿಕಾರಿ (ಬಸವಾದಿತ್ಯ) , A-4 ಮಠದ ಕಾರ್ಯದರ್ಶಿ ಪರಮಶಿವಯ್ಯ, A-5 ವಕೀಲ ಗಂಗಾಧರಯ್ಯ ನಾಪತ್ತೆಯಾಗಿದ್ದಾರೆ. ಮುರುಘಾಮಠದಲ್ಲೇ ವಾಸ್ತವ್ಯ ಹೂಡಿದ್ದ A-1 ಮುರುಘಾ ಶ್ರೀ ಅವರನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ. A- 2 ಲೇಡಿ ವಾರ್ಡನ್ ಪೊಲೀಸರ ವಶದಲ್ಲಿದ್ದು,  ಪ್ರಸ್ತುತ ಸಾಂತ್ವನ ಕೇಂದ್ರದಲ್ಲಿದ್ದಾರೆ.

 
 
 
 
 
 
 
 
 
 
 

Leave a Reply