ಉಡುಪಿ: ಶ್ಯಾಮ್ ಎಂಬ ವ್ಯಕ್ತಿಯ ಮೇಲೆ ಮೇ 23 ರಂದು ನಡೆದ ಏಕಾಏಕಿ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಜೂ.4ರಂದು ಆರೋಪಿಗಳಾದ ಚರಣ್, ಪುನೀತ್, ಮುಹಮ್ಮದ್ ಫರ್ವೆಝ್, ಅಭಿಜೀತ್ ಎಂಬವರನ್ನು ಉಡುಪಿ ರಾಜಾಂಗಣದ ಪಾರ್ಕಿಂಗ್ ಬಳಿಯ ಮಥುರ ಕಂಫರ್ಟಸ್ಸ್ನಲ್ಲಿ ಪೊಲೀಸರು ಬಂಧಿಸಿದ್ದಾರೆ.ಇನ್ನುಳಿದ ಇಬ್ಬರನ್ನು ಶ್ಯಾನ್ವಾಝ್ ಮತ್ತು ರತನ್ ಇವರನ್ನು ಚರಣ್ ನೀಡಿದ ಮಾಹಿತಿಯಂತೆ ಆದಿ ಉಡುಪಿಯಲ್ಲಿ ಬಂಧಿಸಲಾಗಿದೆ.ಲಾಕ್’ಡೌನ್ ನಿಯಮ ಉಲ್ಲಂಘಿಸಿ ಇವರಿಗೆ ಇರಲು ರೂಮು ಕೊಟ್ಟ ಹೊಟೇಲ್ ಮಾಲಕ ಮತ್ತು ಮ್ಯಾನೇಜರ್ ಮೇಲೂ ಪ್ರಕರಣ ದಾಖಲಾಗಿದೆ.
ಶ್ಯಾಮ್ ಎಂಬಾತ ಮೇ 23ರಂದು ರಾತ್ರಿ ತನ್ನ ಸ್ನೇಹಿತರೊಂದಿಗೆ ಪುತ್ತೂರು ಗ್ರಾಮದ ರಾಜೀವ ನಗರದಲ್ಲಿರುವ ಬಾವಿಕಟ್ಟೆಯಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದು, ಅಲ್ಲಿಗೆ ಬಂದ ಆರೋಪಿಗಳು ಹಳೆ ವೈಷಮ್ಯದಿಂದ ಕೊಲೆ ಮಾಡುವ ಉದ್ದೇಶದಿಂದ ಶ್ಯಾಮ್ ಅವರಿಗೆ ಏಕಾಏಕಿಯಾಗಿ ತಲ್ವಾರ್ ಮತ್ತು ಇತರ ಆಯುಧಗಳಿಂದ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಕೊಲೆ ಪ್ರಯತ್ನ ಪ್ರಕರಣ ದಾಖಲಾಗಿತ್ತು.
ಈ ಆರೋಪಿಗಳನ್ನು ಬಂಧಿಸುವ ಕಾರ್ಯಚರಣೆಯಲ್ಲಿ ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ ಕುಮಾರ್ ಪಿ, ಅಪರಾಧ ಶಾಖೆಯ ಉಪನಿರೀಕ್ಷಕ ವಾಸಪ್ಪ ನಾಯ್ಕ್, ಮಹಿಳಾ ಪೊಲೀಸ್ ಠಾಣೆಯ ಎಸ್ಸೈ ವೈಲೆಟ್ ಫೇಮಿನಾ, ಎಎಸೈ ವಿಜಯ್, ಸಿಬ್ಬಂದಿ ಜೀವನ್, ರಾಜೇಶ್, ಮನೋಹರ್, ಚೇತನ್, ರಿಯಾಝ್ ಮತ್ತು ವಿಶ್ವನಾಥ ಭಾಗಿಯಾಗಿದ್ದರು.