ಚಿಂತನಾಲಹರಿಯೊಳಗೆ ಸದಾ ಹರಿದಾಡುತ್ತಿದ್ದ ಅಸಲಿ ಘಟನೆಗಳು/”ಮೋಹದಿಂದ ಮೋಸದ ಜಾಲಕ್ಕೆ”

ಕಾಲ ಬದಲಾಗಿದೆ ನಿಜಾ, ಆದರೆ ಜನರ ಮನಸ್ಥಿತಿ ಬದಲಾಗಿಲ್ಲ. ಹಾಗಾಗಿ ಬದಲಾದ ಕಲಿತ ಜನ ನಮ್ಮನ್ನು ಸುಲಭವಾಗಿ ಮೋಸ ಮಾಡಿ ಬಿಡುತ್ತಾರೆ. ಹಿಂದೆ ಮೋಸ ಮಾಡುವುದು ಬಹಳ ಕಷ್ಟವಾಗುತ್ತಿತ್ತು. ಮೋಸ ಮಾಡುವವನಿಗೆ ಎಂಟೆದೆ ಇರಬೇಕಿತ್ತು. ಈಗ ಆ ರೀತಿ ಇಲ್ಲ, ಕ್ಷಣಾರ್ಧದಲ್ಲಿ ಬಹಳ ನಯ, ನಾಜೂಕಿನಿಂದ ಮೋಸ ಮಾಡಿ ಬಿಡುತ್ತಾರೆ‌. ಅವರ ಸುಳಿವೇ ಸಿಗದಂತೆ ಅರಿವಿಗೆ ಬಾರದಂತೆ ಮರೆಯಾಗಿ ಬಿಡುತ್ತಾರೆ. ಆದರೆ ಮೋಸ ಹೋಗುವವರು ಯಾರು ಅಂತಿರಾ? ನಾವು ವಿದ್ಯಾವಂತರು, ಬುದ್ದಿವಂತರೆನ್ನುವ ದೊಡ್ಡ ದಡ್ಡ ಜನರು ಎಂದರೆ ನಮಗೇ ನಾವೇ ಅಚ್ಚರಿ ಪಡಬೇಕಾಗುತ್ತದೆ.

ಹೌದು, ಈಚೆಗೆ ಎಲ್ಲರ ಕೈಲೂ ಮೊಬೈಲ್ ‌ಗಳು‌. ದೇಶದ ಜನಸಂಖ್ಯೆಯ ಶೇ.70ಕ್ಕೂ ಹೆಚ್ಚು ಅಂದರೆ 760 ಮಿಲಿಯನ್ ( 76 ಕೋಟಿ) ಜನ ಸ್ಮಾರ್ಟ್ ಪೋನ್ ಬಳಸುತ್ತಿದ್ದಾರೆ. ಸುಮಾರು 56 ಕೋಟಿ ಜನ ಇಂಟರ್ ನೆಟ್ ಬಳಸುತ್ತಾರೆ. ಸುಮಾರು 45 ಕೋಟಿ ಜನ ಆಂಡ್ರಾಯ್ಡ್ ಪೋನ್ ಬಳಸುತ್ತಾರೆ. ಇದೆಲ್ಲಾ ಯಾಕೆ ಅಂತಿರಾ ?

ಇಷ್ಟು ಜನ ಈ ಮೊಬೈಲ್ ಪೋನ್‌ಗಳಿಂದ ಬೇಕಾದ್ದು, ಬೇಡವಾದ್ದನ್ನು ನೋಡುತ್ತಾ, ಕೇಳುತ್ತಾ ತಮಗೇ ಗೊತ್ತಿಲ್ಲದಂತೆ ತಮ್ಮ ಇರುವಿಕೆಯನ್ನೇ ಮರೆತು ಬಿಟ್ಟಿದ್ದಾರೆ. ಮೊಬೈಲ್ಲೇ ಜಗತ್ತು, ಮೊಬೈಲ್ಲೇ ಜೀವ, ಮೊಬೈಲ್ಲೇ ಸುಖ.. ಮೊಬೈಲ್ಲೇ ಎಲ್ಲಾ ಆಗಿದೆ.

ಮೊಬೈಲ್ ಎಂಬ ಸಣ್ಣ ಅಂಗೈ ಸಾಧನ ಬಹತೇಕರ ಬದುಕನ್ನೇ ಕಿತ್ತು ಕೊಂಡಿದೆ ಎಂದರೆ ಸುಳ್ಳಾಗಲಾರದು. ಯುವ ಸಮೂದಾಯ ಆ ಚಿಕ್ಕ ಸಾಧನದೊಳಗೆ ಕುಳಿತು, ಜಗತ್ತು ನೋಡುತ್ತಾ, ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಬಾಲ್ಯ ದಾಟಿ ಹರೆಯ ಬರುವುದೊರಳಗೆ ಅದರಾಚೆಗಿನ ಎಲ್ಲವೂ ಮಾಯಾಲೋಕದಂತೆ ತೆರೆದುಕೊಂಡು ಕೊನೆಗೆ ಜೀವನ ಇಷ್ಟೇನಾ? ಎನ್ನುವ ನೀರಸತನಕ್ಕೆ ಬಂದು ಕೂತಿರುವುದುಂಟು.

ಇದರಿಂದ ಒಂದು ರೀತಿಯ ಮಾನಸಿಕ ಅಸಮಾತೋಲನ ಕಳೆದುಕೊಂಡು ಒಂಟಿತನ, ಬೇಸರ, ಅಧೈರ್ಯ, ಜಿಗುಪ್ಸೆಗಳು ಮನೆ ಮಾಡುತ್ತಿರುವುದು ತೆರೆದ ಸತ್ಯ. ಜೊತೆಗೆ ಫೇಸ್‌ಬುಕ್‌, ವಾಟ್ಸಾಪ್, ಟ್ವಿಟರ್, ಇನ್‌ಸ್ಟಾಗ್ರಾಂ…ಇತ್ಯಾದಿ ಸೋಷಿಯಲ್ ಮಿಡಿಯಾಗಳು ಒಂದು ರೀತಿಯ ಭ್ರಮಾ ಲೋಕ ತೆರೆದು ಸ್ವಾಗತಿಸುತ್ತಿರುವ ಹೊತ್ತಲ್ಲಿ ಯುವ ಮನಸ್ಸುಗಳು ಅಲ್ಲಿ ಸ್ವತಂತ್ರವಾಗಿ ಸ್ವಚ್ಚಂಧವಾಗಿ ವಿಹರಿಸುತ್ತಾ ಅಂಗೈಯಲ್ಲಿ ಚಂದ್ರಲೋಕ ಕಾಣುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಕೆಲವು ವಿಕೃತ ಮನಸ್ಥಿತಿಯ ವಿದ್ಯಾವಂತರು ಫೇಕ್ ಅಕೌಂಟ್ ತೆರೆದು ರಾಜಕೀಯ ಲಾಭಕ್ಕಾಗಿ ಸುಳ್ಳುಗಳನ್ನೇ ಸತ್ಯ ಎಂದು ನಂಬಿಸಿ ಧರ್ಮ, ಜಾತಿಯ ನಶೆ ಏರಿಸಿದರೆ ಮತ್ತಷ್ಟು ಜನರು ಯುವಕ, ಯುವತಿಯರನ್ನು ತಪ್ಪು ದಾರಿಗೆ ಎಳೆದು, ಸ್ವಾರ್ಥಕ್ಕೆ ಬಳಸಿಕೊಂಡು ಅವರ ಬದುಕು ಹಾಳು ಮಾಡುತ್ತಿದ್ದಾರೆ.

ಮತ್ತಷ್ಟು ಜನ ಅಮಾಯಕ ಅವಿವಾಹಿತ ಮಹಿಳೆಯರು, ವಿವಾಹಿತ ಗೃಹಿಣಿಯರನ್ನು ಆಕರ್ಷಿಸಿ, ನಂಬಿಸಿ ಆನ್‌ಲೈನ್ ಮೂಲಕವೇ ಅವರಿಂದ ಹಣ, ವಡವೆ ಕಿತ್ತುಕೊಂಡು ಕೊನೆಗೆ ಶೀಲಗಳನ್ನು ದೋಚುತ್ತಿರುವ ಪ್ರಸಂಗ ಹೆಚ್ಚುತ್ತಿದೆ.ವಿದೇಶಿ ವ್ಯಾಮೋಹಕ್ಕೆ ಮನಸೋತ ಯುವಕರು, ಪುರುಷರು ವಿದೇಶಿ ಅಂದಚೆಂದದ ಹೆಣ್ಣುಗಳ ಮೋಹಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದು ಕೊಂಡು ಮನೆ ಮೂಲೆ ಸೇರುತ್ತಿರುವ ಘಟನೆಗಳು ಸಾಕಷ್ಟು ನಡೆಯುತ್ತಿವೆ.

ಇನ್ನೂ ದುರಾಸೆಯ ಜನ ಸುಲಭವಾಗಿ ಸಿಗುವ ಹಣದ ಆಸೆಗೆ ಬಲಿಯಾಗಿ ಕೈಯಲಿದ್ದು ಕಳೆದುಕೊಂಡು ಸಾಲ ಮಾಡಿ ನೇಣು ಹಾಕಿಕೊಂಡ ಘಟನೆಗಳಿಗೇನು ಕಮ್ಮಿ ಇಲ್ಲ.ಕೆಲವು ಆನ್‌ಲೈನ್ ಖದೀಮರು ಹೆಸರಾಂತ ಶೆಲ್, ಆರ್‌ಬಿಐ, ಎಸ್‌ಬಿಐ ಇತರೆ ಪ್ರತಿಷ್ಠಿತ ಸಂಸ್ಥೆಯ ಹೆಸರಲ್ಲಿ ಅಮಾಯಕರಿಗೆ ಬಹುಮಾನದ ನೆಪದಲ್ಲಿ ವಂಚಿಸುತ್ತಲೇ ಇದ್ದಾರೆ.

ಈಚೆಗೆ ಪ್ರತಿಷ್ಠಿತರ ಫೇಸ್‌ಬುಕ್‌ ಅಕೌಂಟ್ ಹ್ಯಾಕ್ ಮಾಡಿ, ಅವರ ಸ್ನೇಹಿತರಿಂದ ಹಣ ವಸೂಲಿ ಮಾಡಿ ವಂಚಿಸುತ್ತಿರುವುದು ಹೆಚ್ಚುತ್ತಿದೆ. ಲಕ್ಷ, ಕೋಟಿ ಬಹುಮಾನ ಬಂದಿದೆ ಎಂದು ಮೆಸೇಜ್ ಕಳುಹಿಸಿ ಮೊಬೈಲ್ ಕಂಪನಿಗಳ ಹೆಸರಲ್ಲಿ ವರ್ಷದ ಗ್ರಾಹಕರಾಗಿ ಚಿನ್ನ ಗೆದ್ದಿದ್ದೀರಾ, ವಜ್ರ ಗೆದ್ದಿದ್ದೀರಾ, ಬೈಕ್, ಕಾರು, ನಿವೇಶನ, ಭಂಗಲೆ ವಿಜೇತರಾಗಿದ್ದೀರಾ ಎಂದು ನಾನಾ ಆಸೆ ಹುಟ್ಟಿಸಿ, ಅಟ್ಟಕ್ಕೇರಿಸಿ, ಸಣ್ಣದಾಗಿ ತಗುಲಾಕಿಸಿಕೊಂಡು ಕೊನೆಗೆ ಲಕ್ಷ ಲಕ್ಷ ವಂಚಿಸಿರುವ ಘಟನೆಗಳು ನೂರಾರು ಉದಾಹರಣೆಗಳು ನಮ್ಮ ಮುಂದೆ ಇದೆ.

ಈಚೆಗೆ ವಿದೇಶಿ ಮಹಿಳೆಯೊಬ್ಬಳು ರಾಜ್ಯದ ಯುವಕನನ್ನು ನಂಬಿಸಿ ಲಕ್ಷಾಂತರ ರೂಪಾಯಿ ದೋಚಿದರೆ, ತಿಪಟೂರಿನ ಮಹಿಳಾ ವೈದ್ಯೆಯೊಬ್ಬರು ವಜ್ರದ ಆಸೆಗೆ ನಲವತ್ತು ಲಕ್ಷ ಕಳೆದುಕೊಂಡರು. ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕ ಕೆ.ಷಡಕ್ಷರಿ, ಕಲ್ಪತರು ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಜಗದೀಶ್ ಮತ್ತಿತರರ ಹೆಸರಲ್ಲಿ ಆವರ ಸ್ನೇಹಿತರಿಂದಲೇ ಹಣ ಪಡೆದು ವಂಚಿಸಿರುವ ಪ್ರಕರಣಗಳು ಹೆಚ್ಚುತ್ತಿವೆ‌.

ವಿಕೃತ ಮನಸ್ಥಿಯ ಗಂಡಸರು, ಯುವಕರು ಸುಂದರ ಮಹಿಳೆಯರ ಹೆಸರಲ್ಲಿ ಫೇಸ್‌ಬುಕ್‌ ಖಾತೆ ತೆರೆದು ಪುರುಷರು ಮತ್ತು ಮಹಿಳೆಯರನ್ನು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚುವ ಜೊತೆಗೆ ವಿಡಿಯೋ ತೆಗೆದು ಬ್ಲಾಕ್ ಮೇಲ್ ಮಾಡುತ್ತಿರುವ ಘಟನೆಗಳು ಗಣನೀಯವಾಗಿ ಹೆಚ್ಚುತ್ತಿವೆ.
ಯಾವುದು ಬಹು ಆಕರ್ಷಿತವೋ ಅದೇ ಈಗ ಜೀವಕ್ಕೆ ಸಂಚಕಾರ ತರುತ್ತಿದೆ. ಹೆಚ್ಚಾದರೆ ಅಮೃತವೂ ವಿಷ ಎನ್ನುವಂತಾಗಿದ್ದರೂ ನಮ್ಮ ವಿದ್ಯಾವಂತ ಜನರು ಬುದ್ದಿ ಕಲಿಯಲಾರರು.

ಡಿಜಿಟಲ್ ಇಂಡಿಯಾ ನೆಪದಲ್ಲಿ ವ್ಯವಹಾರ ಆನ್‌ಲೈನ್ ಆಗಿ ಬದಲಾಗುವ ಹೊತಲ್ಲಿ ಕೆಲವು ಖದೀಮರು ಗ್ರಾಹಕರನ್ನ ವಂಚಿಸಿ, ಅವರ ಖಾತೆಯಿಂದಲೇ ಹಣ ಲಪಟಾಯಿಸುತ್ತಿದ್ದಾರೆ. ಇಂತಹ ಮೋಸಗಳನ್ನು ನಿಯಂತ್ರಿಸಬೇಕಾದ ಸರ್ಕಾರ ಜಾಣ ಮೌನ ವಹಿಸಿದೆ‌‌. ಸೈಬರ್ ಕ್ರೈಮ್ ಇಲಾಖೆ ನೆಪ ಮಾತ್ರಕ್ಕಿದ್ದು ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ…

ಇಂತಹ ನೂರಾರು ಸಮಸ್ಯೆಗಳೊಳಗೆ ಪರಿಹಾರ ಹುಡುಕುವಾಗ ಬೆಕ್ಕಿಗೆ ಗಂಟೆ ಕಟ್ಟೋರು ಯಾರು .?

– ತಿಪಟೂರು ಕೃಷ್ಣ, ಪತ್ರಕರ್ತ, ಚಿಂತಕ. (ದಾಖಲೆಗಳಿವೆ)

 
 
 
 
 
 
 
 
 
 
 

Leave a Reply