ಮಂಗಳೂರಿನಲ್ಲಿ ಕೋಟ್ಯಾಂತರ ರೂ ಮೌಲ್ಯದ ಗಾಂಜಾ ವಶ

ಮಂಗಳೂರು: ನಗರದ ಸಿಸಿಬಿ ಪೊಲೀಸರು ದೇರಳಕಟ್ಟೆಯಲ್ಲಿ ಬುಧವಾರ ನಡೆಸಿದ ಕಾರ್ಯಾಚರಣೆಯಲ್ಲಿ 1.236 ಗ್ರಾಂ ಹೈಡೋವೀಡ್ ಗಾಂಜಾ ವಶಕ್ಕೆ ಪಡೆಯಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಕಾಸರಗೋಡು ಜಿಲ್ಲೆಯ ಉಪ್ಪಳ ಮಂಗಲ್ಪಾಡಿ ನಿವಾಸಿ ಅಜ್ಮಲ್ ಟಿ. ಹಾಗೂ ಮೂಲತಃ ಕನ್ಯಾಕುಮಾರಿ ನಿವಾಸಿ, ಪ್ರಸ್ತುತ ಸುರತ್ಕಲ್‍ನಲ್ಲಿ ವಾಸವಿರುವ ಎಂಬಿಬಿಎಸ್ ವಿದ್ಯಾರ್ಥಿನಿ ಮಿನು ರಶ್ಮಿ ಬಂಧಿತ ಆರೋಪಿಗಳು. ಮಾರುಕಟ್ಟೆಯಲ್ಲಿ ಈ ಗಾಂಜಾ ಅಂದಾಜು 30 ಲಕ್ಷ ರೂ. ನಿಂದ ಒಂದು ಕೋಟಿ ರೂ. ವರೆಗೆ ಬೆಲೆಬಾಳುವಂತಹದ್ದು ಎಂದು ತಿಳಿಸಿದ್ದಾರೆ.

ಈ ಆರೋಪಿಗಳು ಹೈಡ್ರೋವೀಡ್ ಗಾಂಜಾವನ್ನು ತರಿಸಿಕೊಂಡು ಕೊಣಾಜೆ, ಉಳ್ಳಾಲ, ಉಪ್ಪಳ ಹಾಗೂ ಮಂಗಳೂರು ಕಡೆಗಳಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಲು ತಮ್ಮ ಏಜೆಂಟ್‍ಗಳಿಗೆ ನೀಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ. ಪ್ರಕರಣದಲ್ಲಿ ಕಾಸರಗೋಡು ಮೂಲಕ ಡಾ.ನದೀರ್ ಎಂಬಾತ ಪ್ರಮುಖ ಆರೋಪಿಯಾಗಿದ್ದು, ಆತ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಅವರು ತಿಳಿಸಿದರು.

ಪ್ರಕರಣದ ಆರೋಪಿ ಮಿನು ರಶ್ಮಿ ಕಾಂಞಗಾಡ್ ಹರಿಮಲ ಆಸ್ಪತ್ರೆಯಲ್ಲಿ ತರಬೇತಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾಳೆ. ಡಾ.ನದೀರ್ ಹಾಗೂ ಅಜ್ಮಲ್‌ನೊಂದಿಗೆ ಸ್ನೇಹ ಹೊಂದಿರುವ ಈಕೆ ಮಂಗಳವಾರ ಕಾಂಞಗಾಡ್‍ನಿಂದ ರೈಲು ಮುಖಾಂತರ ಮಂಗಳೂರಿಗೆ ಬಂದು ನದೀರ್‌ನ ಸೂಚನೆ ಮೇರೆಗೆ ಆಕೆ ತನ್ನ ಕಾರಿನಲ್ಲಿ ಹೈಡ್ರೋವೀಡ್ ಗಾಂಜಾವನ್ನು ನದೀರ್‌ನ ಸ್ನೇಹಿತರಿಗೆ ನೀಡಲು ದೇರಳಕಟ್ಟೆಗೆ ಬಂದಿದ್ದಳು. ಈ ಸಂದರ್ಭ ಅಜ್ಮಲ್ ಜತೆಗಿದ್ದ.ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಬಂಧಿತ ಆರೋಪಿಗಳಿಂದ ಒಂದು ಹ್ಯುಂಡೈ ಸ್ಯಾಂಟ್ರೋ ಕಾರು, 2 ಮೊಬೈಲ್‍ಗಳನ್ನು ಹಾಗೂ 1.236 ಕೆಜಿ ಹೈಡ್ರೋವೀಡ್ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.ಎಕೊನಾಮಿಕ್ ಮತ್ತು ನಾರ್ಕೊಟಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆ.ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಜ್ಮಲ್ ಎಂಬಾತನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಷ್ಟಡಿಗೆ ತೆಗೆದುಕೊಳ್ಳಲಾಗಿದೆ.

ಮಂಗಳೂರು ಕಮಿಷನರೇಟ್‍ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಮ್ ಶಂಕರ್ ನೇತೃತ್ವದಲ್ಲಿ ಸಿಸಿಬಿ ಪೊಲೀಸ್ ಇನ್‍ಸ್ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್‍ಐ ರಾಜೇಂದ್ರ, ಸಿಸಿಬಿ ಘಟಕದ ಎಎಸ್‍ಐಗಳಾದ ಮೋಹನ್ ಕೆ.ವಿ, ಎಎಸ್‍ಐ ಶಶಿಧರ ಶೆಟ್ಟಿ, ಎಎಸ್‍ಐ ಹರೀಶ್ ಹಾಗೂ ಸಿಸಿಬಿ ಘಟಕದ ಸಿಬ್ಬಂದಿ ಹಾಗೂ ಎಕನಾಮಿಕ್ ಆಯಂಡ್ ನಾರ್ಕೊಟಿಕ್ ಠಾಣೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply