ಡಿವೈಡರ್ ಹತ್ತಿ ಸ್ಕೂಟರ್, ಕಾರುಗಳಿಗೆ ಸರಣಿ ಡಿಕ್ಕಿ

ಮಂಗಳೂರು, ಎ.9: ಕಾರು ಚಾಲಕನ ನಿರ್ಲಕ್ಷ್ಯ ಚಾಲನೆಯಿಂದಾಗಿ ನಗರದ ಬಲ್ಲಾಳ್ ಬಾಗ್ ನಲ್ಲಿ ದುರಂತವೇ ನಡೆದುಹೋಗಿದೆ. ಬಿಎಂಡಬ್ಲ್ಯು ಕಾರನ್ನು ಅತಿ ವೇಗದಿಂದ ಚಲಾಯಿಸಿಕೊಂಡು ಬಂದ ಸವಾರ ಡಿವೈಡರ್ ದಾಟಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಸ್ಕೂಟರ್, ಕಾರುಗಳಿಗೆ ಡಿಕ್ಕಿಯಾಗಿದ್ದು, ಸ್ಕೂಟರಿನಲ್ಲಿ ತೆರಳುತ್ತಿದ್ದ ಅಮಾಯಕಿ ಮಹಿಳೆಯೊಬ್ಬರು ಕಾರಿನಡಿಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.

ಮಧ್ಯಾಹ್ನ 1.30ರ ಸುಮಾರಿಗೆ ಘಟನೆ ನಡೆದಿದ್ದು, ಬಿಎಂಡಬ್ಲ್ಯು ಚಾಲಕ ಶ್ರವಣ್ ದೇವಾಡಿಗನನ್ನು ಕಾರಿನಿಂದ ಹೊರಕ್ಕೆಳೆದು ಆಕ್ರೋಶಿತ ಸ್ಥಳೀಯರು ಯದ್ವಾತದ್ವಾ ಥಳಿಸಿದ್ದಾರೆ. ಕಾರು ಚಾಲಕ ಪಿವಿಎಸ್ ಕಡೆಯಿಂದ ಲಾಲ್ ಬಾಗ್ ನತ್ತ ತೆರಳುತ್ತಿದ್ದು ಕಾರನ್ನು ಅತಿ ವೇಗದಿಂದ ಚಲಾಯಿಸಿದ್ದರಿಂದ ಡಿವೈಡರ್ ಮೇಲಕ್ಕೆ ಹತ್ತಿ ಹೋಗಿದೆ. ಅಲ್ಲದೆ, ವಿರುದ್ಧ ದಿಕ್ಕಿನಲ್ಲಿ ಸ್ಕೂಟರಿನಲ್ಲಿ ಬರುತ್ತಿದ್ದ ಮಹಿಳೆಗೆ ಕಾರು ಡಿಕ್ಕಿಯಾಗಿದೆ. ಇದರಿಂದ ರಸ್ತೆಗೆ ಎಸೆಯಲ್ಪಟ್ಟಿದ್ದಲ್ಲದೆ, ಮತ್ತೆ ಎರಡು ಕಾರುಗಳಿಗೂ ಡಿಕ್ಕಿಯಾಗಿ ನಿಂತಿದೆ.

ಸ್ಕೂಟರಿನಲ್ಲಿದ್ದ ಮಹಿಳೆ ಗಂಭೀರ ಗಾಯಗೊಂಡಿದ್ದು, ಅವರನ್ನು ಸ್ಥಳೀಯರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೊಬ್ಬ ಮಹಿಳೆ ರಸ್ತೆ ದಾಟಲೆಂದು ಡಿವೈಡರ್ ನಲ್ಲಿ ನಿಂತಿದ್ದು, ಆಕೆಯೂ ಕಾರಿನ ಧಾವಂತಕ್ಕೆ ಮತ್ತೊಂದು ರಸ್ತೆಗೆ ಬಿದ್ದಿದ್ದಾರೆ. ಆಕೆಯ ಕಾಲಿಗೂ ಪೆಟ್ಟಾಗಿದೆ. ಕೂಡಲೇ ಉದ್ರಿಕ್ತಗೊಂಡ ಇತರ ವಾಹನಗಳ ಸವಾರರು ಬಿಎಂಡಬ್ಲ್ಯು ಕಾರು ಚಾಲಕನನ್ನು ಹೊರಕ್ಕೆಳೆದು ಮುಖ ಮೂತಿ ನೋಡದೆ ತದುಕಿದ್ದಾರೆ. ಡಿಕ್ಕಿಯಿಂದಾಗಿ ಒಂದು ಭಾಗಕ್ಕೆ ಪೂರ್ತಿ ಜಖಂ ಆಗಿರುವ ಸ್ವಿಫ್ಟ್ ಕಾರಿನ ಚಾಲಕ, ಆರೋಪಿ ಯುವಕನನ್ನು ರಸ್ತೆಯಲ್ಲಿ ಎಳೆದಾಡಿದ್ದಲ್ಲದೆ, ಬೂಟು ಗಾಲಿನಿಂದ ಒದ್ದು ಆಕ್ರೋಶ ತೀರಿಸಿಕೊಂಡಿದ್ದಾರೆ. ಆತ ಸಾರಿ ಸಾರಿ ಎಂದರೂ ಜನರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಆಟೋ ಚಾಲಕರು ಸೇರಿ ಯದ್ವಾತದ್ವಾ ಹೊಡೆದಿದ್ದಾರೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಮತ್ತು ಇನ್ನೊಂದು ಕಾರಿನಲ್ಲಿದ್ದ ಒಂದು ಮಗುವಿಗೆ ಗಾಯವಾಗಿದೆ. ಮೂರು ಕಾರುಗಳು ಜಖಂ ಆಗಿವೆ, ಒಂದು ಸ್ಕೂಟರ್ ಪೂರ್ತಿ ಅಪ್ಪಚ್ಚಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರವಣ್ ದೇವಾಡಿಗ ಇತ್ತೀಚೆಗಷ್ಟೇ ಸೆಕಂಡ್ ಹ್ಯಾಂಡ್ ಬಿಎಂಡಬ್ಲ್ಯು ಕಾರೊಂದನ್ನು ಖರೀದಿಸಿದ್ದು, ಐಷಾರಾಮಿ ಕಾರಿನಲ್ಲಿ ಹಾಯಾಗಿ ಹೋಗುತ್ತಿದ್ದಾಗಲೇ ದುರಂತ ಸಂಭವಿಸಿದೆ. ಬಳಿಕ ಟ್ರಾಫಿಕ್ ಪೊಲೀಸರು ಆರೋಪಿ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಕೆಲಹೊತ್ತು ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿತ್ತು.

 
 
 
 
 
 
 
 
 
 
 

Leave a Reply