ಮಗು ಅಪಹರಣ ಪ್ರಕರಣ: ಉಡುಪಿ ಪೋಲೀಸರ ಕಾರ್ಯಾಚರಣೆಯಿಂದ ಸುಖಾಂತ್ಯ

ಉಡುಪಿ: ಕರಾವಳಿ ಬೈಪಾಸ್ ಬಳಿಯಿಂದ ರವಿವಾರ ಬೆಳಗ್ಗೆ ಅಪಹರಣಕ್ಕೆ ಒಳಗಾದ ಮಗುವನ್ನು ಕ್ಷಿಪ್ರ ಕಾರ್ಯಾಚರಣೆ ಮೂಲಕ ಆರೋಪಿ ಸಹಿತ ಪತ್ತೆ ಹಚ್ಚುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿ ಬಾಗಲಕೋಟೆಯ ಪರಶು ಎಂಬಾತನನ್ನು ಕುಮಟಾ ರೈಲ್ವೆ ನಿಲ್ದಾಣದಲ್ಲಿ ಸ್ಥಳಿಯ ಪೊಲೀಸರ ಸಹಕಾರದೊಂದಿಗೆ ರವಿವಾರ ರಾತ್ರಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಮಗು ಶಿವರಾಜ್ (2.4 ವರ್ಷ) ಮತ್ತು ಆರೋಪಿಯನ್ನು‌ ಇಂದು ಬೆಳಗ್ಗೆ ಪೊಲೀಸರು ಉಡುಪಿಗೆ ಕರೆ ತಂದಿರುವುದಾಗಿ ತಿಳಿದು ಬಂದಿದೆ.

ಪರಶು ರವಿವಾರ ಬೆಳಗ್ಗೆ ಕರಾವಳಿ ಬೈಪಾಸ್ ನಿಂದ ಸಿಟಿಬಸ್ ನಲ್ಲಿ ಪ್ರಯಾಣಿಸಿ ಸಂತೆಕಟ್ಟೆಯಲ್ಲಿ ಮಗುವಿನೊಂದಿಗೆ ಕೆಂಪು ಬಣ್ಣದ ಬಸ್ ಹತ್ತಿರುವುದಾಗಿ ಮಹಿಳೆಯೊಬ್ಬರು ನೀಡಿದ ಮಾಹಿತಿಯಂತೆ ಉಡುಪಿ ನಗರ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ನೇತೃತ್ವದ ತಂಡ ತನಿಖೆ ಚುರುಕುಗೊಳಿಸಿತು.

ಬಳಿಕ ಆತ ಹತ್ತಿರುವ ಬಸ್ ಪತ್ತೆ ಹಚ್ಚಿದ ತಂಡ, ಬಸ್ ನಿರ್ವಾಹಕನನ್ನು ಸಂಪರ್ಕಿಸಿತು. ಆತ ತಿಳಿಸಿರುವಂತೆ ಆರೋಪಿ ಮಗುವಿನೊಂದಿಗೆ ಭಟ್ಕಳದಲ್ಲಿ ಇಳಿದು ಹೋಗಿದ್ದನು. ಬಳಿಕ ಪೊಲೀಸರು ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು.

ಭಟ್ಕಳ, ಕುಮಟಾ ಸೇರಿದಂತೆ ಕರಾವರ ಪೊಲೀಸರು ಹುಡುಕಾಟ ಆರಂಬಿಸಿದರು. ರಾತ್ರಿ ವೇಳೆ ಕುಮಟಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದರು ಎಂದು ಮೂಲಗಳು ತಿಳಿಸಿವೆ.

ಆರೋಪಿ ಬಾಗಲಕೋಟೆಯ ದಂಪತಿಯ ಮಗುವನ್ನು‌ ರವಿವಾರ ಬೆಳಗ್ಗೆ ಅಪಹರಣ ಮಾಡಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

 
 
 
 
 
 
 
 
 

Leave a Reply