ಕುಂದಾಪುರದ ದಂಪತಿಗಳಿಂದ ನಕಲಿ ಕಾಗದ ಪತ್ರ ಬ್ಯಾಂಕ್ ಗೆ ನೀಡಿ ಕೋಟಿ ಕೋಟಿ ವಂಚನೆ  

ಕುಂದಾಪುರ : ನಕಲಿ ಆಡಿಟ್ ರಿಪೋರ್ಟ್ ಸಲ್ಲಿಸಿ ಕರ್ನಾಟಕ ಬ್ಯಾಂಕಿಗೆ ದಂಪತಿಗಳಿಬ್ಬರು ಕೋಟ್ಯಾಂತರ ರೂಪಾಯಿ ವಂಚಿಸಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರದ ವಂಚಕ ದಂಪತಿಯ ವಿರುದ್ದ ಬ್ಯಾಂಕ್ ಮ್ಯಾನೇಜರ್ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸಿದ್ದಾಪುರದಲ್ಲಿರುವ ಗಜಾನನ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕರಾಗಿರುವ ರಾಘವೇಂದ್ರ ಹೆಮ್ಮಣ್ಣ ಹಾಗೂ ಪತ್ನಿ ಆಶಾ
ಕಿರಣ ಹೆಮ್ಮಣ್ಣ ಎಂಬವರು ಹೆಮ್ಸ್ ಪುಡ್ಸ್ ಪ್ರೈ ಲಿಮಿಟೆಡ್ ಕಂಪೆನಿಯನ್ನು ಆರಂಭಿಸಿದ್ದರು. ಬರೋಬ್ಬರಿ 10.90 ಕೋಟಿ ರೂಪಾಯಿ ವಾರ್ಷಿಕ ವಹಿವಾಟನ್ನು ಕಂಪೆನಿ ನಡೆಸುತ್ತಿದೆ ಎಂಬ ನಕಲಿ ಆಡಿಟ್ ರಿಪೋರ್ಟ್ ನ್ನು ಬ್ಯಾಂಕಿಗೆ ಸಲ್ಲಿಸಿದ್ದರು.

ಈ ದಾಖಲೆಯ ಆಧಾರದಲ್ಲಿ ಕರ್ನಾಟಕ ಬ್ಯಾಂಕ್  ಸಿದ್ದಾಪುರ ಶಾಖೆಯಿಂದ ಓವರ್ ಡ್ರಾಫ್ಟ್ ಸಾಲವಾಗಿ 3.75 ಕೋಟಿ ರೂಪಾಯಿ, ಯಂತ್ರೋಪಕರಣ ಖರೀದಿಗಾಗಿ 2.70 ಕೋಟಿ ರೂಪಾಯಿ ಹಾಗೂ ಹೊಸ ಕಟ್ಟಡ ನಿರ್ಮಾಣಕ್ಕೆಂದು 25 ಲಕ್ಷ ರೂಪಾಯಿ ಹಣವನ್ನು ಸಾಲದ ರೂಪದಲ್ಲಿ ಪಡೆದಿದ್ದರು. ಆದರೆ ಸಾಲ ಪಡೆದ ನಂತರದಲ್ಲಿ ದಂಪತಿಗಳು ಸಾಲವನ್ನು ಸರಿಯಾಗಿ ಪಾವತಿ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಂಕಿನ ಸಿಬ್ಬಂದಿಗಳು ಸಾಲ ವಸೂಲಾತಿಗೆ ಮುಂದಾಗಿದ್ದರು.

ಸಾಲ ಪಡೆಯುವ ವೇಳೆಯಲ್ಲಿ ಕಂಪೆನಿಯ ದಾಸ್ತಾನಿನಲ್ಲಿ ಬರೋಬ್ಬರಿ 5.27 ಕೋಟಿ ರೂಪಾಯಿ ದಾಸ್ತಾನು ಇರುವುದಾಗಿ ಹೇಳಿದ್ದರು. ಇದನ್ನು ನಂಬಿದ್ದ ಬ್ಯಾಂಕ್ ಸಿಬ್ಬಂದಿ ದಾಸ್ತಾನು ಕೊಠಡಿಯನ್ನು ಪರಿಶೀಲಿಸಿದಾಗ ಅಲ್ಲಿ ಯಾವುದೇ ದಾಸ್ತಾನು ಇರಲಿಲ್ಲ.

ನಂತರದಲ್ಲಿ ಕಂಪೆನಿಯ ವೆಬ್ ಸೈಟ್ ಚೆಕ್ ಮಾಡಿದಾಗ ಅದರಲ್ಲಿ ಕಂಪೆನಿಯು ವಾರ್ಷಿಕವಾಗಿ ಕೇವಲ 15 ಲಕ್ಷ ರೂಪಾಯಿ ವಾರ್ಷಿಕ ವಹಿವಾಟು ನಡೆಸುತ್ತಿದೆ ಎಂದು ತಿಳಿಸಲಾಗಿದೆ. ದಂಪತಿಗಳು ಒಟ್ಟು ಬ್ಯಾಂಕಿಗೆ 6.74 ಕೋಟಿ ರೂಪಾಯಿ ಸಾಲ ಪಾವತಿಸದೇ ವಂಚಿಸಿದ್ದಾರೆ. ಈ ಕುರಿತು ಕರ್ನಾಟಕ ಬ್ಯಾಂಕಿನ ಸಿದ್ದಾಪುರ ಶಾಖೆಯ ಮ್ಯಾನೇಜರ್ ಶ್ರೀನಿವಾಸ ಶೆಣೈ  ಶಂಕರನಾರಾಯಣ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆಯನ್ನು ಆರಂಭಿ ಸಿದ್ದಾರೆ.

 
 
 
 
 
 
 
 
 
 
 

Leave a Reply