ವಿ.ಕೆ.ಶಶಿಕಲಾ ನಟರಾಜನ್​ ಅವರ 2000 ಕೋಟಿ ರೂ.ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ಐಟಿ

ನವದೆಹಲಿ: ತಮಿಳುನಾಡಿನ ಅಮ್ಮ ಖ್ಯಾತಿಯ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಪ್ತೆ, ಸದ್ಯ ಜೈಲಿನಲ್ಲಿ ರುವ ವಿ.ಕೆ.ಶಶಿಕಲಾ ನಟರಾಜನ್​ ಅವರ 2000 ಕೋಟಿ ರೂ.ಮೌಲ್ಯದ ಆಸ್ತಿಯನ್ನುಆದಾಯ ತೆರಿಗೆ ಇಲಾಖೆ ಇಂದು ಮುಟ್ಟುಗೋಲು ಹಾಕಿಕೊಂಡಿದೆ. 

ಸಿರುಥಾವೂರ್ ಮತ್ತು ಕೊಡನಾಡುವಿನಲ್ಲಿರುವ 300 ಕೋಟಿ ರೂ.ಮೌಲ್ಯದ ಆಸ್ತಿಯನ್ನೂ ಜಪ್ತಿ ಮಾಡಲಾಗಿದ್ದು, ಬೇನಾಮಿ ನಿಷೇಧ ಕಾಯ್ದೆಯಡಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಎಲ್ಲಾ ಆಸ್ತಿ ಶಶಿಕಲಾ, ಇಳವರಸಿ ಮತ್ತು ಸುಧಾಕರನ್​ ಹೆಸರಿನಲ್ಲಿದ್ದು, ಅವುಗಳಿಗೆ ಐಟಿ ಇಲಾಖೆಯ ಬೇನಾಮಿ ನಿಷೇಧ ದಳ ಮುಟ್ಟುಗೋಲು ನೋಟಿಸ್ ನೀಡಿದೆ.

ಈ ಬಗ್ಗೆ ಐಟಿ ಅಧಿಕೃತವಾಗಿ ಹೇಳಿಕೆ ನೀಡಿದ್ದು, ಸರಿಸುಮಾರು 2000 ಕೋಟಿ ರೂ.ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದೆ. ಸದ್ಯ ಬೇನಾಮಿ ಆಸ್ತಿ ಗಳಿಕೆ ಪ್ರಕರಣದಲ್ಲಿಯೇ ಜೈಲುಪಾಲಾಗಿರುವ ಶಶಿಕಲಾ ಇನ್ನು ನಾಲ್ಕು ತಿಂಗಳಲ್ಲಿ ಬಿಡುಗಡೆಯಾಗಲಿದ್ದಾರೆ. 

ಆದರೆ ತನ್ನ ಬಿಡುಗಡೆಯ ಕುರಿತು ಹೊರಗಿನವರಿಗೆ ತಿಳಿಸಬೇಡಿ ಎಂದು ಅವರು ಜೈಲಾಧಿಕಾರಿಗಳಿಗೆ ಲಿಖಿತವಾಗಿ ತಿಳಿಸಿದ್ದಾರೆ. ಹಾಗೆ ಇಳವರಸಿ ಮತ್ತು ಸುಧಾಕರನ್​ ಕೂಡ ಜೈಲಿನಲ್ಲಿಯೇ ವಾಸವಿದ್ದಾರೆ.

Leave a Reply