ಐಸಿಎಸ್ ನಂಟು ಶಂಕೆ, ಮಂಗಳೂರಿನಲ್ಲಿ ಮಾಜಿ ಶಾಸಕನ ಮೊಮ್ಮಗ ಸಹಿತ 4 ಜನ ಬಂಧನ

ಬೆಂಗಳೂರು:  ರಾಜ್ಯದ ಮಂಗಳೂರು, ಬೆಂಗಳೂರು ಹಾಗೂ ಜಮ್ಮು-ಕಾಶ್ಮೀರದಲ್ಲಿ ಬುಧವಾರ ಏಕಕಾಲಕ್ಕೆ ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು, ಕನ್ನಡದ ಕಟ್ಟಾಳು ಎಂದೇ ಜನಜನಿತರಾಗಿದ್ದ ಸಾಹಿತಿ, ಮಂಗಳೂರು ಬಳಿಯ ಉಳ್ಳಾಲದ ಮಾಜಿ ಶಾಸಕ ದಿ.ಬಿ.ಎಂ. ಇದಿನಬ್ಬ ಅವರ ಮೊಮ್ಮಗ ಅಮ್ಮರ್‌ ಅಬ್ದುಲ್‌ ರಹಮಾನ್‌ ಸೇರಿದಂತೆ ನಾಲ್ವರನ್ನು ಬಂಧಿಸಿದೆ.

ಅಮ್ಮರ್‌ ಅಲ್ಲದೆ, ಬೆಂಗಳೂರಿನ ಶಂಕರ್‌ ವೆಂಕಟೇಶ್‌ ಪೆರುಮಾಳ್‌ ಅಲಿಯಾಸ್‌ ಅಲಿ ಮೌವಿಯಾ, ಕಾಶ್ಮೀರದ ಶ್ರೀನಗರದ ಒಬೈದ್‌ ಹಮೀದ್‌ ಮತ್ತು ಬಂಡಿಪೋರದ ಮುಝಾಮಿಲ್‌ ಹಸನ್‌ ಬಟ್‌ ಅವರನ್ನು ಬಂಧಿಸಲಾಗಿದೆ. ಐಸಿಸ್‌ ಸೇರಿದಂತೆ ಅನೇಕ ಉಗ್ರ ಸಂಘಟನೆಗಳ ನಂಟು ಹೊಂದಿರುವ ಅನುಮಾನದ ಮೇರೆಗೆ ಇವರನ್ನು ಸೆರೆ ಹಿಡಿಯಲಾಗಿದ್ದು, ಬಂಧಿತರಿಂದ ಮೊಬೈಲ್‌, ಲ್ಯಾಪ್‌ಟಾಪ್‌ ಸೇರಿದಂತೆ ಅನೇಕ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಇವರೆಲ್ಲರೂ ಸಿರಿಯಾ ಮೂಲದ ಇಸ್ಲಾಮಿಕ್‌ ಸ್ಟೇಟ್‌(ಐಸಿಸ್‌) ಉಗ್ರ ಸಂಘಟನೆಗೆ ಯುವಕರ ನೇಮಕಾತಿ ನಡೆಸುತ್ತಿದ್ದರು ಎನ್ನಲಾಗಿದೆ. ಬಂಧಿತರಿಗೆ ಐಸಿಸ್‌, ಜಮ್ಮು-ಕಾಶ್ಮೀರದ ಉಗ್ರ ಸಂಘಟನೆ ಜೊತೆಗೆ ಸಂಪರ್ಕ ಇತ್ತು. ಮಾತ್ರವಲ್ಲದೆ ಕರ್ನಾಟಕ ಮತ್ತು ಕೇರಳಗಳಲ್ಲಿ ಕೆಲ ಪ್ರಮುಖರ ಕೊಲೆಗೆ ಸಂಚು ರೂಪಿಸಿದ್ದ ಐಸಿಸ್‌ನೊಂದಿಗೆ ನಂಟು ಹೊಂದಿದ್ದ ಇರುವ ಕೇರಳದ ಮಹಮ್ಮದ್‌ ಅಮೀನ್‌ ಜೊತೆಗೆ ಸಂಪರ್ಕ ಇತ್ತು. 

ಜೊತೆಗೆ ಜಿಹಾದಿ ಕೃತ್ಯಗಳಿಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದರೊಂದಿಗೆ ಹಣಕಾಸು ಸಂಗ್ರಹವನ್ನೂ ಮಾಡುತ್ತಿದ್ದರು ಎಂಬ ಮಾಹಿತಿ ಲಭಿಸಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಕೇರಳದಲ್ಲಿ ಇತ್ತೀಚಿಗೆ ಪತ್ತೆಯಾಗಿದ್ದ ಐಸಿಸ್‌ ಶಂಕಿತ ಉಗ್ರ ಮಹಮ್ಮದ್‌ ಅಮೀನ್‌ ಬೆನ್ನುಹತ್ತಿದ್ದಾಗ ಕರ್ನಾಟಕ ದಲ್ಲಿ ಐಸಿಸ್‌ ಸಂಪರ್ಕ ಜಾಲದ ಬಗ್ಗೆ ಸಿಕ್ಕಿದ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆದಿದೆ. ಮಹಮ್ಮದ್‌ ಅಮೀನ್‌ ಫೇಸ್‌ಬುಕ್‌, ಟೆಲಿಗ್ರಾಮ್‌, ಹೋಪ್‌ ಹಾಗೂ ಇನ್‌ಸ್ಟಾಗ್ರಾಮ್‌ ಸೇರಿದಂತೆ ಸಾಮಾಜಿಕ ಜಾಲತಾಣ ಗಳಲ್ಲಿ ಖಾತೆಗಳನ್ನು ತೆರೆದು ಬೋಧನೆ ಮಾಡುತ್ತಿದ್ದ. 

ಈ ಬಗ್ಗೆ ಮಾಹಿತಿ ಪಡೆದ ಎನ್‌ಐಎ, ಇದೇ ವರ್ಷದ ಮಾಚ್‌ರ್‍ನಲ್ಲಿ ಮಹಮ್ಮದ್‌ ವಿರುದ್ಧ ಸ್ವಯಂಪ್ರೇರಿತವಾಗಿ ಎಫ್‌ಐಆರ್‌ ದಾಖಲಿಸಿ ತನಿಖೆ ಶುರು ಮಾಡಿತ್ತು. ತನಿಖೆ ವೇಳೆ ಉಳ್ಳಾಲದ ಇದಿನಬ್ಬ ಅವರ ಮೊಮ್ಮಗ ಅಮ್ಮರ್‌ ಅಬ್ದುಲ್‌ ರಹಮಾನ್‌ ಹಾಗೂ ಬೆಂಗಳೂರಿನ ಶಂಕರ್‌ ವೆಂಕಟೇಶ್‌ ಪೆರುಮಾಳ್‌ ಅಲಿಯಾಸ್‌ ಅಲಿ ಮೌವಿಯಾ ಸೇರಿದಂತೆ ನಾಲ್ವರು ಆರೋಪಿಗಳ ಪಾತ್ರ ಪತ್ತೆಯಾಯಿತು. 
ಈ ನಾಲ್ವರು ಸಹ, ಧರ್ಮ ಬೋಧನೆ ಮಾಡಿ ಜಿಹಾದಿ ಹೋರಾಟದ ನೆಪದಲ್ಲಿ ಯುವಕರನ್ನು ಐಸಿಸ್‌ ಸಂಘಟನೆಗೆ ನೇಮಕಾತಿ ಮಾಡುತ್ತಿದ್ದರು ಎಂದು ಎನ್‌ಐಎ ಮೂಲಗಳು ಹೇಳಿವೆ. ಸಿರಿಯಾದಲ್ಲಿ ಐಸಿಸ್‌ ಆಡಳಿತಕ್ಕೆ ಹಿನ್ನೆಡೆ ಉಂಟಾದ ಬಳಿಕ ಕಾಶ್ಮೀರಕ್ಕೆ ಧಾರ್ಮಿಕ (ಹಿಜರಾಹ್‌) ವಲಸೆಗೆ ಬಂದ ಮಹಮ್ಮದ್‌ ಹಾಗೂ ಆತನ ಸಹಚರರು, ಕಾಶ್ಮೀರದ ಉಗ್ರ ವಕಾರ್‌ ಲೋನ್‌ ಅಲಿಯಾಸ್‌ ವಿಲ್ಸನ್‌ ಜತೆ ಸೇರಿದ್ದರು. ಆನಂತರ ಉಗ್ರ ಸಂಘಟನೆಗೆ ದೇಣಿಗೆ ಸಂಗ್ರಹಿಸಿ ಆನ್‌ಲೈನ್‌ನಲ್ಲಿ ಅವರು ವ್ಯವಹರಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಮಂಗಳೂರಿನ ಹೊರವಲಯದ ಉಳ್ಳಾಲದ ಮಾಸ್ತಿಕಟ್ಟೆಎಂಬಲ್ಲಿರುವ ಇದಿನಬ್ಬರ ಪುತ್ರ ಬಿ.ಎಂ.ಬಾಷಾ ಅವರ ಮನೆಗೆ ಬುಧವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ದಿನಪೂರ್ತಿ ಕುಟುಂಬದವರ ತನಿಖೆ ನಡೆಸಿದ್ದು, ಮನೆಯೊಳಗೆ ಅಗತ್ಯ ದಾಖಲೆಗಳಿಗಾಗಿ ಜಾಲಾಡಿದ್ದಾರೆ. 

ದಿನಪೂರ್ತಿ ತಪಾಸಣೆ ನಡೆಸಿದ ಅಧಿಕಾರಿಗಳು ಮನೆಯಲ್ಲಿದ್ದ ಲ್ಯಾಪ್‌ಟಾಪ್‌, ಹಾರ್ಡ್‌ಡಿಸ್ಕ್‌, ಪೆನ್‌ಡ್ರೈವ್‌ ಮೊಬೈಲ್‌, ಸಿಮ್‌ಗಳು, ಎಲೆಕ್ಟ್ರಾನಿಕ್‌ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ. ಎನ್‌ಐಎ ವಿಭಾಗದ ಡಿಐಜಿ ಶ್ರೇಣಿಯ ಅಧಿಕಾರಿ ಉಮಾ ಎಂಬವರ ನೇತೃತ್ವದಲ್ಲಿ ದಾಳಿ ನಡೆದಿದೆ. ನಾಲ್ಕು ಕಾರುಗಳಲ್ಲಿ 25 ಮಂದಿಯಿದ್ದ ಅಧಿಕಾರಿಗಳ ತಂಡ ಉಳ್ಳಾಲದ ಮಾಸ್ತಿಕಟ್ಟೆಗೆ ಆಗಮಿಸಿತ್ತು. ಈ ತಂಡಕ್ಕೆ ಮಂಗಳೂರಿನ ಸ್ಥಳೀಯ ಪೊಲೀಸರು ಕೂಡ ಭದ್ರತೆ ಒದಗಿಸಿದ್ದರು.

ಆರು ವರ್ಷಗಳ ಹಿಂದೆ ಇದಿನಬ್ಬ ಅವರ ಮೊಮ್ಮಗಳ ಸಹಿತ ಕುಟುಂಬ ಕೇರಳದಿಂದ ನಾಪತ್ತೆಯಾಗಿದೆ. ಇದಿನಬ್ಬರ ಮೊಮ್ಮಗಳು ಡಾ.ಅಜ್ಮಲ್‌ಗೆ ಕೇರಳದ ಕಣ್ಣೂರಿನ ಎಂಬಿಎ ಪದವೀಧರ ಶಿಯಾಸ್‌ ಎಂಬಾತನ ಜೊತೆ 2015ರಲ್ಲಿ ವಿವಾಹವಾಗಿತ್ತು. ಒಂದು ವರ್ಷ ಬಳಿಕ ಪತಿ ಹಾಗೂ ಪತ್ನಿ ನಿಗೂಢವಾಗಿ ಕೇರಳದಿಂದ ಕಣ್ಮರೆಯಾಗಿದ್ದರು. ಇವರಿಬ್ಬರು ಸಿರಿಯಾಗೆ ತೆರಳಿ ಐಸಿಸ್‌ ಸೇರ್ಪಡೆಯಾಗಿದ್ದಾರೆ ಎಂದು ಹೇಳಲಾಗಿತ್ತು.

ಅಲ್ಲಿಂದ ಇಲ್ಲಿವರೆಗೆ ಇವರ ಸುಳಿವು ಪತ್ತೆಯಾಗಿಲ್ಲ. ಐಸಿಸ್‌ನಲ್ಲಿ ಸಕ್ರಿಯವಾಗಿ ಇದ್ದಾರೋ ಇಲ್ಲವೋ ಎಂಬುದು ಕೂಡ ಯಾರಿಗೂ ಗೊತ್ತಾಗಿಲ್ಲ. ಇನ್ನು ಇದಿನಬ್ಬರ ಪುತ್ರ ಬಿ.ಎಂ.ಭಾಷಾ ಮಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದಾರೆ. ಇವರ ಪುತ್ರ ಅಮ್ಮರ್‌ ಅಬ್ದುಲ್‌ ರಹಮಾನ್‌ ಕೂಡ ಉದ್ಯಮ ನಡೆಸುತ್ತಿದ್ದಾರೆ. ಅಮ್ಮರ್‌ಗೆ ಮಡಿಕೇರಿಯ ದೀಪ್ತಿ ಮಾರ್ಲ ಎಂಬವರ ಜೊತೆ ವಿವಾಹವಾಗಿದ್ದು, ಬಳಿಕ ಆಕೆ ತನ್ನ ಹೆಸರನ್ನು ಮರಿಯಾ ಎಂದು ಬದಲಾಯಿಸಿದ್ದರು.
Xಐಸಿಸ್‌ಗೆ ನೇಮಕಾತಿ, ಕಾಶ್ಮೀರಿ ಉಗ್ರರ ನಂಟು, ಕರ್ನಾಟಕ-ಕೇರಳದಲ್ಲಿ ಕೊಲೆಗೆ ಸಂಚು ಶಂಕೆ ಮೇರೆಗೆ ದಾಳಿ Xಮಂಗಳೂರು ಬಳಿಯ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಇದಿನಬ್ಬ ಪುತ್ರ ಬಿ.ಎಂ.ಬಾಷಾ ನಿವಾಸಕ್ಕೆ ದಾಳಿ Xಬುಧವಾರ ಬೆಳಗ್ಗೆ 4 ಕಾರುಗಳಲ್ಲಿ 25 ಎನ್‌ಐಎ ಸಿಬ್ಬಂದಿ ಆಗಮನ. ದಿನವಿಡೀ ಮನೆ ತಪಾಸಣೆ, ವಿಚಾರಣೆ. Xಮೊಬೈಲ್‌, ಲ್ಯಾಪ್‌ಟಾಪ್‌, ಪೆನ್‌ಡ್ರೈವ್‌, ಹಾರ್ಡ್‌ಡಿಸ್ಕ್‌, ಸಿಮ್‌ ಸೇರಿ ಎಲೆಕ್ಟ್ರಾನಿಕ್‌ ಉಪಕರಣಗಳು ವಶಕ್ಕೆ ಬೆಂಗಳೂರು, ಜಮ್ಮು-ಕಾಶ್ಮೀರದಲ್ಲೂ ದಾಳಿ ನಡೆಸಿದ ಅಧಿಕಾರಿಗಳಿಂದ ಮೂವರು ಶಂಕಿತರ ಉಗ್ರರ ಬಂಧನ. 
 
 
 
 
 
 
 
 
 
 
 

Leave a Reply