ಫೇಸ್ ಬುಕ್ ನಲ್ಲಿ ನಕಲಿ ಖಾತೆದಾರ ಬಗ್ಗೆ ಎಚ್ಚರ 

ಬಂಟ್ವಾಳ: ಸಮಾಜದಲ್ಲಿ ಗಣ್ಯರು, ರಾಜಕೀಯ ಮುಖಂಡರು, ಸರಕಾರಿ ನೌಕರರು, ಪೊಲೀಸ್ ಅಧಿಕಾರಿಗಳ ನಕಲಿ ಫೇಸ್ ಬುಕ್ ಖಾತೆಯನ್ನು ಸೃಷ್ಠಿಸಿ ಹಣ ದೋಚುವ ಜಾಲವೊಂದು ಸಕ್ರೀಯವಾಗಿದ್ದು, ಇದೀಗ ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ ಐ  ಅವರ ಫೇಸ್ ಬುಕ್ ನ ನಕಲಿ ಖಾತೆಯನ್ನು ಕಿಡಿಗೇಡಿಗಳು ಸೃಷ್ಟಿಸಿ, ಯಾಮಾರಿಸಲು ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. 
ಈಗಾಗಲೇ ಫೇಸ್ ಬುಕ್ ನಲ್ಲಿ ಈ ನಕಲಿ ಖಾತೆದಾರ ಕೈಚಳಕವನ್ನು ತೋರಿಸಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ ಐ ಪ್ರಸನ್ನ ಅವರೆಂದೇ ನಂಬಿಸಿ ಮೆಸೆಂಜರ್ ನಲ್ಲಿ ಚಾಟ್ ಮಾಡಿದ್ದಾನೆ. ಅವರ ಬಳಿ ಅರ್ಜೆಂಟ್ ಹಣ ಬೇಕು ಎಂದು ಕೇಳಿದ್ದು, ಬೇಗನೆ ಹಣ ಕಳುಹಿಸಿ, ನನಗೆ ಅಗತ್ಯವಿದೆ ಎಂದಿದ್ದಾನೆ. ಈ ಕುರಿತು ಅನುಮಾನಗೊಂಡ ಸ್ನೇಹಿತರು ಎಸ್ .ಐ. ಪ್ರಸನ್ನ ಅವರಿಗೆ ಮಾಹಿತಿ ನೀಡಿದ್ದು, ಕೂಡಲೇ ಅವರು ಫೇಸ್ ಬುಕ್ ನ ನಕಲಿ ಖಾತೆಯನ್ನು ಬ್ಲಾಕ್ ಮಾಡಿಸಿದ್ದಾರೆ. ಈಗಾಗಲೇ ಅವರು ನಕಲಿ ಫೇಸ್ ಬುಕ್ ಖಾತೆ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 
ಎಸ್ ಐ ಪ್ರಸನ್ನ ಅವರು ಕೂಡ ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ವಿನಂತಿಸಿದ್ದು, ಅನುಮಾನ ಬಂದರೆ ತಕ್ಷಣ ದೂರ ನೀಡುವಂತೆ ಕೋರಿದ್ದಾರೆ. ನಕಲಿ ಖಾತೆದಾರ ಮೊದಲಿಗೆ ಮೆಸೆಂಜರ್ ಮೂಲಕ ಇದ್ದವರಿಗೆಲ್ಲಾ ಫ್ರೆಂಡ್ ರಿಕ್ವಸ್ಟ್ ಕಳಿಸುತ್ತಾನೆ. ನಿಮ್ಮ ಪರಿಚಯಸ್ಥನಿರಬೇಕೆಂದು ನೀವು ಅದಕ್ಕೆ ಒಕೆ ಅಂತೀರಿ. 
ಬಳಿಕ ನಿಧಾನವಾಗಿ ಆತ ಹಣದ ಬೇಡಿಕೆಯನ್ನು ನಿಮ್ಮ ಮುಂದಿಡುತ್ತಾನೆ. ಪೋನ್ ಪೇ ಅಥವಾ ಗೂಗುಲ್ ಪೇ ಮೂಲಕ ಹಣ ರವಾನಿಸುವಂತೆ ಸಲಹೆ ನೀಡುತ್ತಾನೆ. ಇದಕ್ಕೆ ನೀವೇನಾದರೂ ಯಾಮಾರಿದರೆ ನಿಮ್ಮ ಹಣ ಖೋತಾ. ಅನುಮಾನಗೊಂಡು ನೀವೇನಾದರೂ ರಿಪ್ಲೈ ಕೊಟ್ಟರೆ ತಕ್ಷಣ ಆತ ನಕಲಿ ಖಾತೆಯನ್ನು ಮುಚ್ಚಿ ಪರಾರಿಯಾಗುತ್ತಾನೆ. ಹಾಗಾಗಿ ಫೇಸ್ ಬುಕ್ ನಲ್ಲಿ  ಇಂತಹ ನಕಲಿ ಖಾತೆ ಸೃಷ್ಠಿಸಿ ಹಣ ವಸೂಲಿ ಮಾಡುವ ಜಾಲದ ಬಗ್ಗೆ ಎಚ್ಚರದಿಂದ ಇರುವಂತೆ ಪೊಲೀಸ್ ಇಲಾಖೆ ವಿನಂತಿಸಿದೆ.

Leave a Reply