ಮಣಿಪಾಲದಲ್ಲಿ ಡ್ರಗ್ ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿ ಬಂಧನ

ಮಣಿಪಾಲ: ಇಲ್ಲಿನ ವಿದ್ಯಾರ್ಥಿಗಳಿಗೆ ಡ್ರಗ್ ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದು, ಆತನಿಂದ ಸುಮಾರು 15 ಲ.ರೂ. ಮೌಲ್ಯದ ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉತ್ತರ ಭಾರತ ಮೂಲದ ಹಿಮಾಂಶು ಜೋಷಿ (20) ಬಂಧಿತನಾಗಿದ್ದಾನೆ. ಈತ ಮಣಿಪಾಲ ಎಂಐಟಿ ಕಾಲೇಜಿನ ಇನ್‌ಸ್ಟ್ರುಮೆಂಟೇಶನ್ ಆ್ಯಂಡ್ ಕಂಟ್ರೋಲ್ ವಿಭಾಗದ 7ನೇ ಸೆಮಿಸ್ಟರ್‌ನ ವಿದ್ಯಾರ್ಥಿಯಾಗಿದ್ದಾನೆ.

ಆಂತರಿಕ ಭದ್ರತಾ ವಿಭಾಗದ ಮಾಹಿತಿಯಂತೆ ಉಡುಪಿ ಐಎಸ್‌ಡಿ ಘಟಕದ ಪೊಲೀಸರು ಮತ್ತು ಮಣಿಪಾಲ ಪೊಲೀಸರು ಜಂಟಿ ಕಾರ್ಯಚರಣೆ ಕೈಗೊಂಡು ಈತನನ್ನು ಬಂಧಿಸಿದ್ದಾರೆ. ಬಂಧಿತ ಹಿಮಾಂಶು ಬೈಕ್‌ನಲ್ಲಿ ಮಣಿಪಾಲ ಸಮೀಪದ ಶೀಂಬ್ರಾ ಸೇತುವೆ ಬಳಿ ನಿಷೇಧಿತ ಮಾತ್ರೆಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಆತನನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತನಿಂದ 498 ಎಂಡಿಎಂಎ (ನಿಷೇಧಿತ ನಿದ್ರಾಜನಕ) ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿ ಕೊಂಡಿರುವ ಮಾತ್ರೆಗಳ ಮೌಲ್ಯ 14.94 ಲಕ್ಷ ರೂ. ಆಗಿದೆ. ಅಲ್ಲದೇ ಆರೋಪಿಯಿಂದ ಬೈಕ್ ಹಾಗೂ ಮೊಬೈಲ್ ಫೋನನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

ಉಡುಪಿ ಎಸ್ಪಿ ವಿಷ್ಣುವರ್ಧನ್ ಮತ್ತು ಎಎಸ್ಪಿ ಕುಮಾರ ಚಂದ್ರ ಅವರ ಮಾರ್ಗದರ್ಶನದಲ್ಲಿ ಉಡುಪಿ ಐಎಸ್‌ಡಿ ಘಟಕದ ಪೊಲೀಸ್ ನಿರೀಕ್ಷಕ ಪಿ.ಎಸ್. ಮಧು, ಉಡುಪಿ ಉಪ ವಿಭಾಗದ ಡಿವೈಎಸ್ಪಿ ಜೈಶಂಕರ್, ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ ಎಂ. ಗೌಡ, ಪೊಲೀಸ್ ನಿರೀಕ್ಷಕ ರಾಜ್‌ಶೇಖರ್ ವಂದಲಿ, ಉಡುಪಿ ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ನಾಗರಾಜ್ ಹಾಗೂ ಸಿಬ್ಬಂದಿ ಶೈಲೇಶ್, ದಿನೇಶ್ ಶೆಟ್ಟಿ, ಥೋಮನ್ಸ್, ಪ್ರಸನ್ನ, ಮಂಜುನಾಥ ಶೆಟ್ಟಿ, ಪ್ರಸಾದ್ ಶೆಟ್ಟಿ, ಆದರ್ಶ ನಾಯ್ಕ ಭಾಗವಹಿಸಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಅಕ್ರಮ ವಾಗಿ ಆನ್‌ಲೈನ್ ಮೂಲಕ ಎಂಡಿಎಂಎ ಮಾತ್ರೆ ಗಳನ್ನು ತರಿಸಿ, ಮಣಿಪಾಲದ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಡ್ರಗ್ ಜಾಲವನ್ನು ಬೇಧಿಸಲಾಗಿತ್ತು. ಮುಂದು ವರಿದ ಭಾಗವಾಗಿ ಇದೀಗ ಕಾರ್ಯಾಚರಣೆ ನಡೆಸಿರುವ ಉಡುಪಿ ಜಿಲ್ಲಾ ಪೊಲೀಸರು, ಡ್ರಗ್ ಜಾಲವೊಂದನ್ನು ಬೇಧಿಸಿದ್ದಾರೆ.

ಸದ್ಯ ಓರ್ವ ಆರೋಪಿ ಸಿಕ್ಕಿದ್ದು, ಮತ್ತೋರ್ವನಿಗಾಗಿ ಬಲೆ ಬೀಸಿದ್ದಾರೆ. ಈ ದಂಧೆಯಲ್ಲಿ ಇನ್ನಷ್ಟು ಜನರಿರುವ ಸಾಧ್ಯತೆ ಗಳಿದ್ದು, ಪೊಲೀಸರು ತನಿಖೆಯನ್ನು ತೀವ್ರ ಗೊಳಿಸಿದ್ದಾರೆ.

 
 
 
 
 
 
 
 
 
 
 

Leave a Reply