ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಮಾಡುವುದು ಶಿಕ್ಷಾರ್ಹ ಅಪರಾಧ: ಡಾ. ಪ್ರತಾಪ್ ಕುಮಾರ್

ಉಡುಪಿ: ಗರ್ಭಪೂರ್ವ ಮತ್ತು ಪ್ರಸವ ಪೂರ್ವಭ್ರೂಣ ಲಿಂಗ ಪತ್ತೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಕಾನೂನಿನ ಅಡಿಯಲ್ಲಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪ್ರಸೂತಿ ತಜ್ಞ ಹಾಗೂ ಜಿಲ್ಲಾ ಪಿಸಿ ಪಿಎನ್‌ಡಿಟಿ ಸಲಹಾ ಸಮಿತಿ
ಅಧ್ಯಕ್ಷ ಡಾ. ಪ್ರತಾಪ್ ಕುಮಾರ್ ಹೇಳಿದರು.
ಅವರು ಇಂದು ಉಡುಪಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಸಾವ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯಿದೆ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜದಲ್ಲಿ ಪುರುಷ ಮತ್ತು ಮಹಿಳೆಯರ ಸಮಾನ ಅನುಪಾತ ಕಾಪಾಡುವ ದೃಷ್ಟಿಯಿಂದ ಸರಕಾರ ಕಾನೂನನ್ನು ಜಾರಿಗೆ ತಂದಿದೆ. 
ಭ್ರೂಣಲಿಂಗ ಪತ್ತೆ ಮಾಡುವುದು ಕಾನೂನಿನ ಅಡಿಯಲ್ಲಿ ಅಪರಾಧವಾಗಿದ್ದು, ಇದನ್ನು ಉಲ್ಲಂಘಿಸುವವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು ಎಂದರು.
ಪ್ರಸ್ತುತ ಜಿಲ್ಲೆಯಲ್ಲಿ 1000 ಜನ ಪುರುಷರಿಗೆ, 957 ಜನ ಹೆಣ್ಣು ಮಕ್ಕಳಿದ್ದಾರೆ ಎಂದ ಅವರು ಜಿಲ್ಲೆಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಅಸಮತೋಲನ ಉಂಟಾಗದ೦ತೆ ನೋಡಿಕೊಳ್ಳುವುದು ಈ ಸಮಿತಿಯ ಜವಾಬ್ದಾರಿಯಾಗಿದೆ ಎಂದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸ್ಕ್ಯಾನಿಂಗ್  ಸೆಂಟರ್‌ಗಳು ಜಿಲ್ಲಾ ಸಕ್ಷಮ ಪ್ರಾಧಿಕಾರದಿಂದ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು, ಸ್ಕ್ಯಾನಿಂಗ್  ಕೇಂದ್ರ ಗಳಲ್ಲಿ ಸರ್ಕಾರದ ನಿಯಮಾನುಸಾರ ರಿಜಿಸ್ಟರ್ ಮತ್ತು ಮತ್ತಿತರ ದಾಖಲೆಗಳಲ್ಲಿ ನೋಂದಾಯಿಸಬೇಕು ಎಂದರು. ಭ್ರೂಣಲಿಂಗ ಪತ್ತೆಯಿಂದ ಸಮಾಜದಲ್ಲಿ ಆಗುವ ತೊಂದರೆಗಳ ಬಗ್ಗೆ ಹೆಚ್ಚಿನ ಪ್ರಚಾರ ಮಾಡುವುದರೊಂದಿಗೆ ಗಂಡು ಮತ್ತು ಹೆಣ್ಣಿನ ಅನುಪಾತವನ್ನು ಸಮಾನವಾಗಿರುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮರಾವ್ ಕೆ ಮಾತನಾಡಿ, 18 ವರ್ಷದೊಳಗಿನ ಮಹಿಳೆಯರು ಸ್ಕ್ಯಾನಿಂಗ್  ಮಾಡಿಸಲು ಸ್ಕ್ಯಾನಿಂಗ್  ಕೇಂದ್ರಗಳಿಗೆ ಬಂದಾಗ ಅವರನ್ನು ಸಮೀಪದ ಸರಕಾರಿ ಆಸ್ಪತ್ರೆಗಳಿಗೆ ಹೋಗುವಂತೆ ತಿಳಿಸಬೇಕು. ಖಾಸಗಿ ಸ್ಕ್ಯಾನಿಂಗ್  ಸೆಂಟರ್‌ಗಳು ವೈದ್ಯರ ಶಿಫಾರಸು ಪತ್ರದ ಆಧಾರದ ಮೇಲೆ ಸ್ಕ್ಯಾನಿಂಗ್
ಕಾರ್ಯವನ್ನು ಕೈಗೊಳ್ಳಬೇಕು.
ಸ್ಕ್ಯಾನಿಂಗ್  ಶುಲ್ಕದ ವಿವರವನ್ನು ಸ್ಕ್ಯಾನಿಂಗ್  ಕೇಂದ್ರದ ಮುಂಭಾಗ ಪ್ರದರ್ಶಿಸಬೇಕು ಎಂದರು. ಸ್ಕ್ಯಾನಿಂಗ್ ಮಾಲೀಕರು ನಿಗದಿತ ಕಾಲಾವಧಿಯ ಒಳಗೆ ನವೀಕರಣ ಮಾಡಿಸಬೇಕು ಎಂದ ಅವರು ಸ್ಕ್ಯಾನಿಂಗ್  ಕೇಂದ್ರಗಳಲ್ಲಿ ಬಳಕೆ ಮಾಡದೇ ಇರುವ ಹಳೆಯ ಸ್ಕ್ಯಾನಿಂಗ್ ಯಂತ್ರಗಳು ದುರ್ಬಳಕೆಯಾಗುವ ಸಾಧ್ಯತೆ ಇರುವ ಹಿನ್ನೆಲೆ ಅವುಗಳನ್ನು ಸರ್ಕಾರದ
ನಿಯಮಾನುಸಾರ ವಿಲೇವಾರಿ ಮಾಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ, ಮಕ್ಕಳ ತಜ್ಞ ಕಿರಣ್ ಹೆಬ್ಬಾರ್, ಡಾ. ಆಮ್ನಾ ಹೆಗ್ಡೆ, ಡಾ. ದೀಕ್ಷಿತ್, ಡಾ. ಅನಿತಾ ಪ್ರಭು, ಸಮಾಜ ಸೇವಕರುಗಳಾದ ಡಾ. ಗಣೇಶ್ ಪೈ ಮತ್ತು ಸರೀತಾ ಸಂತೋಷ್

ಹಾಗೂ ಮತ್ತಿತರರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply