ಉಡುಪಿ ಬ್ಯಾಂಕಿನಲ್ಲಿ ಉದ್ಯಮಿಯ ದರೋಡೆ ಪ್ರಕರಣ : ಮೂವರು ಆರೋಪಿಗಳ ಬಂಧನ.‌.

ಉಡುಪಿ: ನಗರದಲ್ಲಿ ಷೇರು ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬರನ್ನು ಅಪಹರಿಸಿ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ಕಾರ್ಕಳ ನಿಟ್ಟೆಯ ಅನಿಲ್ ಪೂಜಾರಿ, ನಂದಳಿಕೆಯ ಸಂತೋಷ್ ಬೋವಿ, ಸಾಸ್ತಾನ ಕೋಡಿಯ ಮಣಿ ಯಾನೆ ಮಣಿಕಂಠ ಖಾರ್ವಿ ಯವರನ್ನು ಬಂಧಿಸಿದ್ದಾರೆ.  
 
ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಪಿಸ್ತೂಲ್, ತಲವಾರು, ಸುಲಿಗೆ ಮಾಡಿದ 1.35 ಲಕ್ಷ ರೂಪಾಯಿ, ಮೊಬೈಲನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಷೇರು ವ್ಯವಹಾರ ನಡೆಸುತ್ತಿದ್ದ ತುಮಕೂರು ಜಿಲ್ಲೆಯ ಅಶೋಕ್ ಕುಮಾರ್ ಎಸ್ ಅವರನ್ನು ಅಪಹರಿಸಿ ದರೋಡೆಗೈದ ಆರೋಪಿಗಳನ್ನು ಪೊಲೀಸರು ಕಟಪಾಡಿ ಜಂಕ್ಷನ್ ಬಳಿ ಬಂಧಿಸಲಾಗಿದೆ. 
 
ಮೂಲತಃ ತುಮಕೂರು ನಿವಾಸಿ ಅಶೋಕ್ ಕುಮಾರ್ ನಗರದ ವಾದಿರಾಜ ಕಾಂಪ್ಲೆಕ್ಸ್‍ನಲ್ಲಿ ಷೇರು ಮಾರುಕಟ್ಟೆ ವ್ಯವಹಾರವನ್ನು ಇಬ್ಬರೊಂದಿಗೆ ಸೇರಿ ಮಾಡಿಕೊಂಡಿದ್ದರು. ಇವರು 42 ರಿಂದ 50 ಲಕ್ಷ ರೂ.ಗಳ ಹಣ ಚಲಾವಣೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
 
ಜು.16 ರಂದು ಅಶೋಕ್ ಕುಮಾರ್ ಅವರ ಕಚೇರಿಗೆ ಬಂದಿದ್ದ ಸಂತೋಷ್ ಎಂಬಾತ ವ್ಯವಹಾರದ ಮಾತುಕತೆಯ ಸಲುವಾಗಿ ಇವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಅಜ್ಜರಕಾಡು ಬಳಿ ಹೋಗುವಾಗ ಮತ್ತೆ 4 ಮಂದಿ ಆ ಕಾರನ್ನು ಏರಿದ್ದರು. ಆನಂತರ ಅವರೆಲ್ಲ ಸೇರಿ ಅಶೋಕ್ ಅವರಿಗೆ ಬಲವಂತವಾಗಿ ಮುಖಗವಸು ಹಾಕಿದ್ದಾರೆ. 
 
ರೆಸಾರ್ಟಿಗೆ ತೆರಳಿದ ಅಪಹರಣಕಾರರು ತಲವಾರು ಪಿಸ್ತೂಲ್ ತೋರಿಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ಕುಮಾರ್ ಅವರ ಬಳಿ ಇದ್ದ 2 ಲಕ್ಷ ರೂ. ನಗದು ಹಾಗೂ ಮೊಬೈಲ್, ವಾಚ್ ದೋಚಿದ್ದರು. ಅಲ್ಲದೆ, 70ಲಕ್ಷ ರೂ. ಗೆ ಬೇಡಿಕೆ ಇಟ್ಟು ಜೀವ ಬೆದರಿಕೆ ಕೂಡ ಹಾಕಿದ್ದರು ಎನ್ನಲಾಗಿದೆ.
 
ಬಳಿಕ ಕಳ್ಳರು ಅವರನ್ನು  ಹೆಚ್ಚಿನ ಹಣ ಡ್ರಾ ಮಾಡಲು ಬ್ಯಾಂಕಿಗೆ ಕರೆದುಕೊಂಡು ಹೋಗಿದ್ದ ವೇಳೆ ಬ್ಯಾಂಕಿನಲ್ಲಿ ಅಶೋಕ್ ಅವರು ಮ್ಯಾನೇಜರ್ ಚೇಂಬರ್‌ಗೆ ತೆರಳಿ ನೇರವಾಗಿ ಕಳ್ಳ ಕಳ್ಳ ಎಂದು ಕೂಗಿದ್ದರು. ಬ್ಯಾಂಕ್‍ನಲ್ಲಿ ಸಿಬ್ಬಂದಿಗಳು ಎಚ್ಚೆತ್ತುಕೊಳ್ಳುತ್ತಿದ್ದಂತೆ ಆರೋಪಿಗಳು ಹಣ ದೋಚಿ ಪರಾರಿಯಾಗಿದ್ದರು.
 
 
 
 
 
 
 
 
 
 
 

Leave a Reply