ಚೈತ್ರಾ ವಂಚನೆ ಪ್ರಕರಣ: ಕುಂದಾಪುರ ಹೆಸರು ಬಳಸದಂತೆ ಕೋರ್ಟ್​​ ತಡೆಯಾಜ್ಞೆ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಟಿಕೆಟ್​ ಕೊಡಿಸುವುದಾಗಿ ಹೇಳಿ ಉದ್ಯಮಿಯೊಬ್ಬರಿಂದ ಕೋಟ್ಯಾಂತರ ರೂ. ವಂಚನೆ ನಡೆಸಿರುವ ಪ್ರಕರಣದಲ್ಲಿ ಚೈತ್ರಾ ಹೆಸರಿನ ಜೊತೆಗೆ ‘ಕುಂದಾಪುರ’ ಹೆಸರನ್ನು ಬಳಸದಂತೆ ನಗರದ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಸಾಮಾಜಿಕ ಜಾಲತಾಣ ಹಾಗೂ ಮಾದ್ಯಮಗಳಲ್ಲಿ ಕುಂದಾಪುರ ಹೆಸರು ತೆಗೆದುಹಾಕುವಂತೆ ಕೋರಿ ನ್ಯಾಯಾಲಯಕ್ಕೆ ಕುಂದಾಪುರ ಮೂಲದ ಉದ್ಯಮಿ, ಪ್ರಸ್ತುತ ಬೆಂಗಳೂರು ಹನುಮಂತ ನಗರದ ನಿವಾಸಿ ಗಣೇಶ್​ ಶೆಟ್ಟಿ ಅರ್ಜಿ ಸಲ್ಲಿಸಿದ್ದರು.

ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಚೈತ್ರಾ ಅವರ ಸುದ್ದಿ ಪ್ರಸಾರ ಮಾಡುವಾಗ ಹೆಸರಿನ ಜೊತೆಗೆ ಕುಂದಾಪುರ ಹೆಸರನ್ನು ಬಳಸುವುದರಿಂದ ಕುಂದಾಪುರ ಊರಿನ ಹೆಸರಿಗೆ ಘಾಸಿಯಾಗುತ್ತದೆ. ಈ ಒಂದು ಘಟನೆಯಿಂದ ಭವಿಷ್ಯದ ಪೀಳಿಗೆಯನ್ನು ಕೆಟ್ಟ ದೃಷ್ಟಿಯಿಂದ ನೋಡುವಂತಾಗಬಹುದು. ಕುಂದಾಪುರ ದೇವಾಲಯಗಳಿರುವ ಮತ್ತು ಪ್ರಕೃತಿ ಸೊಬಗಿನ ಊರು. ಈ ಊರಿನ ಹೆಸರು ಆರೋಪಿಯೊಬ್ಬರ ಹೆಸರಿನ ಕೊನೆಯ ಭಾಗವಾಗಿರುವ ಕಾರಣಕ್ಕೆ ಹಾಳಾಗಬಾರದು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಮತ್ತು ತಂಡದ ವಿಚಾರಣೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದು ಈ ನಡುವೆ ಚೈತ್ರಾ ಪ್ರಕರಣದಲ್ಲಿ ಕುಂದಾಪುರ ಹೆಸರನ್ನು ಪದೇ ಪದೇ ಬಳಸುತ್ತಿರುವುದರಿಂದ ಇಲ್ಲಿನ ಸ್ಥಳೀಯರ ಭಾವನೆಗೆ ದಕ್ಕೆ ಯಾಗುತ್ತಿರುವುದರಿಂದ ಮಾದ್ಯಮಗಳಿಗೆ ಕುಂದಾಪುರ ಹೆಸರನ್ನು ಬಳಸದಂತೆ ನಿರ್ಬಂಧ ನೀಡುವಂತೆ ಕೋರ್ಟ್​ ಮೊರೆ ಹೋಗಿದ್ದರು. ಅದರಂತೆ ತಡೆಯಾಜ್ಞೆ ವಿಧಿಸಿದ್ದು, ಎಲ್ಲರಿಗೂ ಸಮನ್ಸ್ ನೀಡಿದ್ದು, ಡಿಸೆಂಬರ್ ೫ಕ್ಕೆ ಕಾಯ್ದಿರಿಸಿದ್ದಾರೆ. ಹೈಕೋರ್ಟ್ ವಕೀಲ ಎಚ್. ಪವನಚಂದ್ರ ಶೆಟ್ಟಿ ವಾದಿಸಿದ್ದರು.

 
 
 
 
 
 
 
 
 
 
 

Leave a Reply