ಉಡುಪಿ: ಕಿರಿಯ ಆರೋಗ್ಯ ಸಹಾಯಕಿ ಹಾಗೂ ಇತರ ಸಿಬಂದಿಗಳಿಗೆ ಕೊರೋನಾ ಸಂಬಂಧಿತ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ಳಂಪಳ್ಳಿ ಉಪಕೇಂದ್ರದ ಆರೋಗ್ಯ ಸಹಾಯಕಿ ವಸಂತಿ ಎಂಬವರು ಬೆಳ್ಳಂಪಳ್ಳಿ ಉಪಕೇಂದ್ರಕ್ಕೆ ಒಳಪಟ್ಟ ಪುಂಟೂರು ಕಂಬ್ಲಿ ಮಜಲು ಎಂಬಲ್ಲಿ ಕೊರೋನಾ ಪಾಸಿಟಿವ್ ಬಂದ ಮಹಿಳೆಯೋರ್ವರ ಪ್ರಾಥಮಿಸಂಪರ್ಕದಲ್ಲಿರುವ ಪತಿಯ ಗಂಟಲು ದ್ರವ ಪರೀಕ್ಷೆಗೆ ತಮ್ಮ ತಂಡದೊಂದಿಗೆ ತೆರಳಿದ್ದರು.
ತಂಡದಲ್ಲಿ ಪ್ರಯೋಗ ಶಾಲೆಯ ಸಿಬಂದಿ ಜ್ಯೋತಿ ಕಿರಣ್, ಡಿ ಗ್ರೂಪ್ ಸಿಬಂದಿ ಪ್ರತಿಮಾ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಕಲಾವತಿ, ಕಾರು ಚಾಲಕ ಸಂತೋಷ್, ಆಶಾ ಕಾರ್ಯಕರ್ತೆ ವಿಜಯ ಅವರುಗಳಿದ್ದು, ಕೊರೋನಾ ಸೋಂಕಿತೆಯ ಪತಿ ಸುರೇಂದ್ರ ಎಂಬವರು ಇವರುಗಳಿಗೆ ಅವಾಚ್ಯ ಶಬ್ಬಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದು ದ್ವಿಚಕ್ರ ವಾಹನವನ್ನು ಜಖಂಗೊಳಿಸಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ, ವಸಂತಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಹಿರಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.