ಆಟೋದಲ್ಲಿ ತೆರಳುತ್ತಿದ್ದ ಯುವತಿ ಮೇಲೆ ಹಾಡಹಗಲೇ ಆಟೋ ಚಾಲಕ ಮತ್ತು ಅವನ ಸ್ನೇಹಿತ ಅತ್ಯಾಚಾರವೆಸಗಿದ್ದು, ವಿಡಿಯೋ ಚಿತ್ರೀಕರಿಸಿ ಪೈಶಾಚಿಕ ಕೃತ್ಯವೆಸಗಿದ ಘಟನೆ ಯಾದಗಿರಿ ತಾಲೂಕಿನಲ್ಲಿ ಸಂಭವಿಸಿದೆ.
ಮನೆ ಕೆಲಸ ಮಾಡಿಕೊಂಡಿದ್ದ ಯಾದಗಿರಿ ತಾಲೂಕಿನ ಹಳ್ಳಿಯೊಂದರ ಯುವತಿಯೊಬ್ಬರು ಏ.26ರಂದು ಯಾದಗಿರಿ ನಗರಕ್ಕೆ ತೆರಳಲೆಂದು ಎಂ.ಹೊಸಳ್ಳಿ ಗ್ರಾಮದ ಹನುಮಂತ ಎಂಬಾತನ ಆಟೋ ಹತ್ತಿದ್ದಳು.
ಈ ವೇಳೆ ಆಟೋ ಚಾಲಕ ತನ್ನ ಸ್ನೇಹಿತನನ್ನೂ ಹತ್ತಿಸಿಕೊಂಡಿದ್ದ. ಯುವತಿ ಹೇಳಿದ ಸ್ಥಳಕ್ಕೆ ಕರೆದೊಯ್ಯುವ ಬದಲು ಬೇರೆಡೆಗೆ ಆಟೋ ತೆರಳುತ್ತಿತ್ತು. ಇದನ್ನು ಪ್ರಶ್ನಿಸಿದ ಯುವತಿಗೆ, ಡೀಸೆಲ್ ಖಾಲಿ ಆಗಿದೆ.
ಮಾರ್ಗದಲ್ಲೇ ಹಾಕಿಸಿಕೊಂಡು ಬಳಿಕ ನಿಮ್ಮನ್ನು ನೀವು ಹೇಳಿದ ಸ್ಥಳಕ್ಕೆ ಕರೆದೊಯ್ಯುತ್ತೇವೆ ಎಂದು ಸುಳ್ಳು ಹೇಳಿದ ಆಟೋ ಚಾಲಕ, ನಗರ ಹೊರಭಾಗದ ವರ್ಕನಳ್ಳಿಯ ನಿರ್ಜನ ಪ್ರದೇಶದಲ್ಲಿ ಪಾಳು ಬಿದ್ದ ಮನೆ ಬಳಿಗೆ ಕರೆದೊಯ್ದಿದ್ದಾನೆ. ಯುವತಿ ಚೀರಾಡಿದರೂ ಬಿಟ್ಟಿಲ್ಲ.
ನಿಮ್ಮ ಕಾಲಿಗೆ ಬೀಳ್ತೇನಿ ನನ್ನನ್ನು ಬಿಟ್ಟುಬಿಡಿ ಎಂದು ಗೋಗರೆದರೂ ಆಟೋ ಚಾಲಕ ಮತ್ತು ಈತನ ಗೆಳೆಯ ಇಬ್ಬರೂ ಆಕೆ ಮೇಲೆ ಅತ್ಯಾಚಾರವೆಸಗಿದ್ದಾರೆ. ಆಟೋ ಚಾಲಕ ಹನುಮಂತ ಅತ್ಯಾಚಾರವೆಸಗುತ್ತಿದ್ದರೆ, ಈ ದೃಶ್ಯವನ್ನು ಈತನ ಗೆಳೆಯ
ನರಸಪ್ಪ ಮೊಬೈಲ್ನಲ್ಲಿ ಸೆರೆ ಹಿಡಿದು ವಿಕೃತಿ ಮೆರೆದಿದ್ದಾನೆ.
ಈ ಬಗ್ಗೆ ಸಂತ್ರಸ್ತ ಯುವತಿಯ ಚಿಕ್ಕಪ್ಪ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಗಳಾದ ಹನುಮಂತ ಮತ್ತು ನರಸಪ್ಪನನ್ನು ಬಂಧಿಸಿ ಆಟೋವನ್ನು ಜಪ್ತಿ ಮಾಡಿದ್ದಾರೆ.