Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

ನ.1 ರಿಂದ ಗ್ರಾಮೀಣ ಪ್ರದೇಶದಲ್ಲಿ ಕಡ್ಡಾಯ ಪ್ಲಾಸ್ಟಿಕ್ ನಿಷೇಧ ಜಾರಿ-ದಿನಕರ ಬಾಬು

ಉಡುಪಿ : ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ನವೆಂಬರ್ 1 ರಿಂದ ಕಡ್ಡಾಯವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸುವ ಕುರಿತಂತೆ ಎಲ್ಲಾ ಪಿಡಿಓಗಳು ಹಾಗೂ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು ಅಗತ್ಯ ಕ್ರಮ ಗಳನ್ನು ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಸೂಚಿಸಿದರು. ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ಲಾಸ್ಟಿಕ್ ನಿಷೇಧ ಕಾಯಿದೆ 2016ರಲ್ಲಿ ಜಾರಿಯಾಗಿದ್ದರೂ ಸಹ ಗ್ರಾಮೀಣ ಪ್ರದೇಶದಲ್ಲಿ ಈ ಬಗ್ಗೆ ಆದೇಶ ಪಾಲನೆ ನಡೆಯುತ್ತಿಲ್ಲ, ಅಂಗಡಿಗಳಲ್ಲಿ, ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಪ್ಲಾಸ್ಟಿಕ್ ಚೀಲಗಳನ್ನು ನೀಡುತ್ತಿರುವುದು ಕಂಡು ಬರುತ್ತಿದೆ, ಪ್ಲಾಸ್ಟಿಕ್‌ಗೆ ಪರ್ಯಾಯ ವಸ್ತುಗಳು ಇದ್ದರೂ ಸಹ ಅವುಗಳ ಬಳಕೆ ನಡೆಯುತ್ತಿಲ್ಲ, ಅದ್ದರಿಂದ ನವೆಂಬರ್ 1 ರಿಂದ ಪ್ಲಾಸ್ಟಿಕ್ ಬಳಸುವವರ ವಿರುದ್ಧ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಕಡ್ಡಾಯವಾಗಿ ದಂಡ ದಾಖಲಿಸಿ, ಈ ಬಗ್ಗೆ ಗ್ರಾಮಗಳಲ್ಲಿ ಇಂದಿನಿಂದಲೇ  ಜಾಗೃತಿ ಮೂಡಿಸುವಂತೆ ದಿನಕರ ಬಾಬು ಹೇಳಿದರು.

ತಾರಸಿ ತೋಟ ನಿರ್ವಹಣೆ ಕುರಿತಂತೆ ಜಿಲ್ಲಾ ತೋಟಗಾರಿಕೆ ಇಲಾಖೆ ಕಟ್ಟಡದ ಮೇಲಿರುವ ಪ್ರಾತ್ಯಕ್ಷಿಕೆಯ ನಿರ್ವಹಣೆ ಯನ್ನು ಸಮರ್ಪಕವಾಗಿ ಮಾಡುವುದರ ಮೂಲಕ ಸಾರ್ವಜನಿಕರಿಗೆ ತಾರಸಿ ತೋಟ ನಿರ್ಮಾಣಕ್ಕೆ ಪ್ರೋತ್ಸಾಹಿಸುವಂತೆ ತೋಟಗಾರಿಕಾ ಇಲಾಖಾಧಿಕಾರಿಗಳಿಗೆ ದಿನಕರ ಬಾಬು ಹೇಳಿದರು.

ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಶೆ.15% ಅಧಿಕ ಮಳೆಯಾಗಿದೆ, 4375 ಮಿ.ಮಿ. ವಾಡಿಕೆ ಮಳೆ ಇದ್ದು, 5051 ಮಿ.ಮಿ ಮಳೆಯಾಗಿದೆ, 273 ಹೆಕ್ಟೇರ್‌ಗೆ ಹಾನಿಯಾಗಿದ್ದು, ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳ ಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಮಾಹಿತಿ ನೀಡಿದರು.

ಮಳೆಯಿಂದಾಗಿ 29 ಹೆಕ್ಟೇರ್ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದ್ದು, ಮಟ್ಟು ಸುತ್ತುಮುತ್ತಲಿನ ಪ್ರದೇಶದಲ್ಲಿ
ಬೆಳೆದಿದ್ದ 6.8 ಹೆಕ್ಟೇರ್ ಮಟ್ಟುಗುಳ್ಳ ಬೆಳೆಗೆ ಹಾನಿಯಾಗಿದ್ದು, 1 ಎಕರೆಗೆ 20,000/- ದಂತೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ ಹೇಳಿದರು. ಜಿಲ್ಲೆಯ ಪ್ರಮುಖ ಇಲಾಖೆಗಳಲ್ಲಿ ಅಧಿಕಾರಿಗಳ ಕೊರತೆಯಿದ್ದು, ಕೂಡಲೇ ಅಧಿಕಾರಿಗಳನ್ನು ನೇಮಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಣಯ ಮಾಡುವಂತೆ ತೀರ್ಮಾನಿಸಲಾಯಿತು.

ಹಿರಿಯ ನಾಗರೀಕರ ಸಹಾಯವಾಣಿ ಸಿಬ್ಬಂದಿಗೆ ಒಂದು ವರ್ಷದಿಂದ ವೇತನ ನೀಡದ ಕುರಿತು ಉಪಾಧ್ಯಕ್ಷೆ ಶೀಲಾ
ಶೆಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಗ್ರಾಮ ಪಂಚಾಯತ್‌ಗಳಿಗೆ ನೇಮಕ ಮಾಡಿರುವ ಆಡಳಿತಾಧಿಕಾರಿಗಳು ನಿಯಮಿತ ವಾಗಿ ಗ್ರಾಮ ಪಂಚಾಯತ್ ಕಚೇರಿಗಳಿಗೆ ಹಾಜರಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದ ಅಧ್ಯಕ್ಷರು ಈ ಬಗ್ಗೆ ಪರಿ ಶೀಲನೆ ನಡೆಸುವಂತೆ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಜಿ ಪುತ್ರನ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ
ಸಮಿತಿ ಅಧ್ಯಕ್ಷ ಪ್ರತಾಪ್ ಹೆಗಡೆ ಮಾರಾಳಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸಿಇಓ ಡಾ.ನವೀನ್ ಭಟ್, ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಯೋಜನಾ ನಿರ್ದೇಶಕ ಗುರುದತ್, ಯೋಜನೆ, ಅಂದಾಜು ಮತ್ತು ಮೌಲ್ಯ ಮಾಪನಾಧಿಕಾರಿ ರಾಧಾಕೃಷ್ಣ ಅಡಿಗ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!