ಶೋಭಾ ಕರಂದ್ಲಾಜೆ ಸಹಿತ ನೂತನ ಕೇಂದ್ರ ಸಚಿವರಿಗೆ ಉಡುಪಿ ಜಿಲ್ಲಾ ಬಿಜೆಪಿಯಿಂದ ಅಭಿನಂದನೆ : ಕುಯಿಲಾಡಿ

ಉಡುಪಿ : ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ರಾಜಕೀಯ ಜೀವನ ಪ್ರಾರಂಭಿಸಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಪರಿವಾರದ ಕಟ್ಟಾಳುವಾಗಿ ಸೇವೆ ಸಲ್ಲಿಸಿ, ಸುಮಾರು 25 ವರ್ಷಕ್ಕೂ ಮಿಕ್ಕಿದ ರಾಜಕೀಯ ಕ್ಷೇತ್ರದ ಅನುಭವದೊಂದಿಗೆ ವಿಧಾನ ಪರಿಷತ್ ಸದಸ್ಯರಾಗಿ, ರಾಜ್ಯದ ಮಾದರಿ ಇಂಧನ ಸಚಿವೆಯಾಗಿ, ಯಶಸ್ವಿ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವೆಯಾಗಿ, 2 ಅವಧಿಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕ್ರಿಯಾಶೀಲ ಸಂಸದೆಯಾಗಿ ಸಾರ್ಥಕ ಸೇವೆ ಸಲ್ಲಿಸಿರುವ ಶೋಭಾ ಕರಂದ್ಲಾಜೆ ಇಂದು ಪ್ರಧಾನಿ ನರೇಂದ್ರ ಮೋದಿ ಸಂಪುಟದ ನೂತನ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆಯಾಗಿ ನೇಮಕಗೊಂಡಿರುವುದು ಅತೀವ ಸಂತಸ ತಂದಿದೆ ಎಂದಿದ್ದಾರೆ.

ಇದು ಪಕ್ಷದ ಎಲ್ಲಾ ನಿಷ್ಠಾವಂತ ಕಾರ್ಯಕರ್ತರಿಗೆ ಸಂದ ಗೌರವ.ತಾನು ವಹಿಸಿಕೊಂಡ ಜವಾಬ್ದಾರಿಯನ್ನು ಬದ್ಧತೆ ಮತ್ತು ನಿಷ್ಠೆಯಿಂದ ನಿಭಾಯಿಸಿಕೊಂಡು ಬಂದಿರುವ ಶೋಭಾ ಕರಂದ್ಲಾಜೆಯವರು ನೂತನ ಕೇಂದ್ರ ಸಚಿವೆ ಜವಾಬ್ದಾರಿಯನ್ನೂ ಸಮರ್ಥವಾಗಿ ನಿರ್ವಹಿಸುತ್ತಾರೆಂಬ ವಿಶ್ವಾಸವಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.ಮೋದಿ ಸಂಪುಟದ ಒಟ್ಟು 43 ನೂತನ ಸಚಿವರಲ್ಲಿ 36 ಹೊಸ ಮುಖಗಳಿಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ ಎಂದು ಹೇಳಿದ್ದಾರೆ.

ಶೋಭಾ ಕರಂದ್ಲಾಜೆ ಜೊತೆಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ಎ.ನಾರಾಯಣ ಸ್ವಾಮಿ, ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ನಾನ ಸಚಿವ ರಾಜೀವ್ ಚಂದ್ರಶೇಖರ್ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿ ಜವಾಬ್ದಾರಿ ಸ್ವೀಕರಿಸಿರುವ ಕರ್ನಾಟಕದ ಈ ಎಲ್ಲಾ ನಾಲ್ಕು ನೂತನ ಕೇಂದ್ರ ಸಚಿವರಿಗೆ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಹಾರ್ದಿಕ ಅಭಿನಂದನೆಗಳು. ತಮ್ಮ ಅಧಿಕಾರದ ಅವಧಿಯಲ್ಲಿ ಖಾತೆಗಳ ಯಶಸ್ವಿ ನಿರ್ವಹಣೆಯೊಂದಿಗೆ ಸಾರ್ಥಕ ಜನಸೇವೆಗೈಯುವಂತಾಗಲಿ ಎಂದು ಕುಯಿಲಾಡಿ ಹಾರೈಸಿದ್ದಾರೆ.

 
 
 
 
 
 
 
 
 
 
 

Leave a Reply