ಪ್ರತೀ ತಾಲೂಕಿನಲ್ಲಿ ಕನಿಷ್ಠ 1-2 ಗೋಶಾಲೆ ನಿರ್ಮಾಣಕ್ಕೆ ಜಾಗ ಗುರುತಿಸಿ ಎಂದ ಉಡುಪಿ ಜಿಲ್ಲಾಧಿಕಾರಿ

ಉಡುಪಿ: ಉಡುಪಿಯ ಎಲ್ಲಾ ತಾಲೂಕುಗಳಲ್ಲಿ ಕನಿಷ್ಠ 1 ರಿಂದ 2 ಗೋಶಾಲೆಗಳನ್ನು ನಿರ್ಮಾಣ ಮಾಡಲು ಬೇಕಾಗುವ ಜಾಗವನ್ನು ಗುರುತಿಸಿ ಕಾಯ್ದಿರಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಶುಕ್ರವಾರ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

2020ರ ಕರ್ನಾಟಕ ಜಾನುವಾರು ಹತ್ಯೆ ಪ್ರತಿಭಂದಕ ಮತ್ತು ಸಂರಕ್ಷಣೆ ನಿಯಮವನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ, ರೈತರು ಮತ್ತು ಸಾರ್ವಜನಿಕರು ತಮ್ಮಲ್ಲಿನ ಅನುತ್ಪಾದಕ ಜಾನುವಾರುಗಳು, ಅಪಘಾತಕ್ಕೀಡಾದ ಜಾನುವಾರುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದಾಗ, ಅವುಗಳನ್ನು ನೋಡಿಕೊಳ್ಳಲು ಸೂಕ್ತವಾಗುವಂತೆ ಪ್ರತಿಯೊಂದು ತಾಲೂಕಿನಲ್ಲಿ ಗೋಶಾಲೆಗಳನ್ನು ಸ್ಥಾಪಿಸುವುದು ಅಗತ್ಯ, ಇದಕ್ಕಾಗಿ ಸೂಕ್ತ ಸ್ಥಳಾವಕಾಶವನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ನೀಲಾವರ ಗೋಶಾಲೆಯ ಟ್ರಸ್ಟಿ ಡಾ.ಸರ್ವೋತ್ತಮ ಉಡುಪ ಮಾತನಾಡಿ ಗೋಶಾಲೆಗಳನ್ನು ಆರಂಭಿಸುವ ವೇಳೆಯೆ, ಅಲ್ಲೇ ಮೇವು ಬೆಳೆಯಬಹುದಾಂತಹ ಜಾಗವನ್ನು ಗುರುತಿಸುವುದು ಉತ್ತಮ ಎಂದರು. 

ತಮ್ಮ ಜಾನುವಾರುಗಳನ್ನು ಸಾಗಾಟ ಮಾಡುವವರು ಪಾಲಿಸಬೇಕಾದ ನಿಯಮಗಳನ್ನು  ಜಿಲ್ಲಾಧಿಕಾರಿ ಹೇಳಿದರು.

* ಸಂಬಂಧಪಟ್ಟ ಎಲ್ಲಾ ಪ್ರಾಧಿಕಾರಗಳಿಂದ ಅನುಮತಿ ಪಡೆದು, ದಾಖಲಾತಿಗಳನ್ನು ಇಟ್ಟುಕೊಂಡಿರಬೇಕು. ಇಲ್ಲವಾದಲ್ಲಿ ಸಾಗಾಟದಲ್ಲಿ ಭಾಗಿಯಾಗಿದ್ದ ಎಲ್ಲರ ಮೇಲೂ ಕ್ರಮ ಕೈಗೊಳ್ಳಬಹುದು.

*ಸಾಗಾಟದ ಸಂದರ್ಭ ಜಾನುವಾರುಗಳಿಗೆ ಯಾವುದೇ ಪೆಟ್ಟು, ಗಾಯಗಳಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.

* ಜಾನುವಾರುಗಳಿಗೆ ಸಾಗಾಟದ ಮೊದಲು ಅಗತ್ಯ ಆಹಾರ ಅಂದರೆ ಹುಲ್ಲು, ನೀರು ನೀಡಿರಬೇಕು.

* ವಾಹನದಲ್ಲಿ ಸರಿಯಾದ ಗಾಳಿ ಬೆಳಕು ಇರಬೇಕು

*ಈ ನಿಯಮಗಳಾನುಸಾರ ಸೂಕ್ತ ವಾಹನದಲ್ಲಿ ಸಾಗಾಟ ಮಾಡಬೇಕು

*ಸಾಗಾಟದ ವೇಗ ಗಂಟೆಗೆ 25 ಕಿ.ಮೀ ಮೀರುವಂತಿಲ್ಲ. 

* ಒಂದಕ್ಕಿಂತ ಹೆಚ್ಚು ಜಾನುವಾರುಗಳಿದ್ದಲ್ಲಿ ಪ್ರತ್ಯೇಕ ಕಂಪಾರ್ಟ್ಮೆಂಟ್ ರೀತಿಯ ವ್ಯವಸ್ಥೆ ಇರಬೇಕು. 

* ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಖಾಸಗಿ ವಾಹನಗಳಲ್ಲಿ ಈ ರೀತಿಯ ಮಾರ್ಪಾಡು ಮಾಡಿಕೊಳ್ಳಲು ಪರವಾನಿಗೆ ನೀಡಬೇಕು. 

* ಜಾನುವಾರುಗಳ ಪ್ರಥಮ ಚಿಕಿತ್ಸೆ ಕಿಟ್ ಅನ್ನು ವಾಹನಗಳಲ್ಲಿ ಇರಿಸುವುದು ಕಡ್ಡಾಯ

*ಬೇಸಿಗೆಯಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರ ವರೆಗೆ ಸಾಗಟ ಮಾಡುವಂತಿಲ್ಲ, ಇನ್ನುಳಿದಂತೆ ಪ್ರತಿ ರಾತ್ರಿ 8 ರಿಂದ ಬೆಳಗ್ಗೆ 6 ರ ವರಗೆ ಸಾಗಾಟ ನಿಷಿದ್ಧ.

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ನಿಯಮ 2020 ರಲ್ಲಿ, ಜಿಲ್ಲೆಗೆ ಸಂಬಂಧಪಟ್ಟ ಆಕ್ಷೇಪಣೆ ಮತ್ತು ಸಲಹೆಗಳನ್ನು ಸ್ವೀಕರಿಸಿ, ಸರ್ಕಾರಕ್ಕೆ ತಲುಪಿಸಲು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಹರೀಶ್ ತಮನಕರ್ ಅವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.ಗೋಶಾಲೆಗಳಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಅನುಮತಿ, ಗೋಶಾಲೆಗಳ ಕಡ್ಡಾಯ ನೊಂದಣಿ, ಗೋಮಾಳ ಜಾಗದ ಅತಿಕ್ರಮಣ ತಡೆಯಲು ಕಠಿಣ ಕ್ರಮ ಇನ್ನಿತರ ಸಲಹೆಗಳನ್ನು ಸದಸ್ಯರು ತಿಳಿಸಿದರು.

 ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಪಶುಪಾಲನಾ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಪ್ರಾಣಿ ದಯಾ ಸಂಘದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply