ಉಡುಪಿ ಜಿಲ್ಲೆಯಲ್ಲಿ 40% ಕಮಿಷನ್ ವ್ಯವಹಾರ ಇಲ್ಲ: ಉದಯ ಕುಮಾರ್ ಶೆಟ್ಟಿ

ರಾಜ್ಯ ಸರ್ಕಾರ 40% ಕಮಿಷನ್ ಕೇಳುತ್ತೆ ಅನ್ನೋ ಆರೋಪ ಮಾಡಲಾಗಿದ್ದು ಈ ಬಗ್ಗೆ ಸ್ಪಷ್ಟನೆ ನೀಡುವ ನಿಟ್ಟಿನಲ್ಲಿ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳಿಂದ ಜನರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದು, ಅದಕ್ಕೆ ಉತ್ತರ ನೀಡುವ ಅವಶ್ಯಕತೆ ಇದೆ. ಇಲ್ಲದಿದ್ದಲ್ಲಿ ನಾವೂ ಕೂಡಾ ಇದರಲ್ಲಿ ಭಾಗಿಯಾಗಿದ್ದೇವೆ ಎನ್ನುವ ಅನುಮಾನ ಜನರಲ್ಲಿ ಮೂಡುತ್ತದೆ. ಉಡುಪಿ ಜಿಲ್ಲೆಯಲ್ಲಿ 25 ವರ್ಷದಿಂದ ಗುತ್ತಿಗೆ ಕಾಮಗಾರಿಗಳನ್ನು ನಡೆಸುತ್ತಿದ್ದೇವೆ. ಇಲ್ಲಿ ಕಳೆದ 25 ವರ್ಷಗಳಿಂದ ಆಡಳಿತ ನಡೆಸಿದ ಯಾವುದೇ ಪಕ್ಷದ ಯಾವುದೇ ಜನಪ್ರತಿನಿಧಿಗಳು ನಮ್ಮಿಂದ ಕಮಿಷನ್ ಪಡೆದಿಲ್ಲ. ಯಾರೂ ಕೂಡಾ ನಮಗೆ ಕಮಿಷನ್ ಗಾಗಿ ಪೀಡನೆ ಮಾಡಿಲ್ಲ. ಸರಕಾರದ ನಿಯಮಾವಳಿಗಳ ಪ್ರಕಾರ ಪಾರದರ್ಶಕ ಟೆಂಡರ್ ಮೂಲಕ ಕಾಮಗಾರಿ ಕೆಲಸಗಳನ್ನು ಮಾಡುತ್ತಾ ಬಂದಿದ್ದೇವೆ.

ಜಿಲ್ಲೆಯಲ್ಲಿ ಸಣ್ಣ ಗುತ್ತಿಗೆದಾರರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಎಲ್ಲಾ ಬೆಳವಣಿಗೆಗಳಿಂದಾಗಿ ಅವರು ಬಳಲುತ್ತಿದ್ದಾರೆ. ಅವರೆಲ್ಲಾ ಗುಣಮಟ್ಟದ ಕಾಮಗಾರಿ ನಡೆಸಿದರೂ ಕ್ಷಪ್ತ ಸಮಯಕ್ಕೆ ಪಾವತಿ ಸಂದಾಯವಾಗುತ್ತಿಲ್ಲ. ಈ ಎಲ್ಲಾ ಗುತ್ತಿಗೆದಾರರು ತೊಂದರೆ ಅನುಭವಿಸುತ್ತಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಅವರು ನಮ್ಮನ್ನು ಒತ್ತಾಯಿಸುತ್ತಿದ್ದಾರೆ. ಆ ಕಾರಣದಿಂದ ಸ್ಪಷ್ಟನೆ ನೀಡುವ ಉದ್ದೇಶದಿಂದ ಮಾಧ್ಯಮದ ಮುಂದೆ ಬಂದಿದ್ದೇವೆ ಎಂದು ಅವರು ಹೇಳಿದರು.

ಜನಪ್ರತಿನಿಧಿಗಳು ಮತ್ತು ಗುತ್ತಿಗೆದಾರರು ಸಮನ್ವಯದಿಂದ ಕೆಲಸ ಮಾಡಿದಾಗ ಮಾತ್ರ ಜಿಲ್ಲೆಯ ಅಭಿವೃದ್ದಿ ಸಾಧ್ಯ. ಇಬ್ಬರ ಮಧ್ಯೆ ತಿಕ್ಕಾಟ ಉಂಟಾದಾಗ ಜಿಲ್ಲೆಯ ಅಭಿವೃದ್ದಿ ಕುಂಠಿತವಾಗುತ್ತದೆ. ಈ ಕ್ಷೇತ್ರದಲ್ಲಿ ಇತ್ತೀಚೆಗಷ್ಟೇ ಕಾಲಿಟ್ಟ ಯುವ ಗುತ್ತಿಗೆದಾರರು ಈ ಆರೋಪ-ಪ್ರತ್ಯಾರೋಪಗಳಿಂದ ಸಂಕಟ ಅನುಭವಿಸುತ್ತಿದ್ದಾರೆ. ಇಂತಹ ಬೆಳವಣಿಗೆಗಳು ಅಭಿವೃದ್ದಿ ದೃಷ್ಟಿಯಿಂದ ಒಳ್ಳೆಯದಲ್ಲ. ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಇಲ್ಲಿ ಇದುವರೆಗೂ ಕಮಿಷನ್ ವ್ಯವಹಾರ ನಡೆದಿಲ್ಲ ಎಂದರು.

 
 
 
 
 
 
 
 
 

Leave a Reply