ಉದ್ಯೋಗಾಕಾಂಕ್ಷಿಗಳು ತಮಗೆ ಆಸಕ್ತಿಯಿರುವ ಕ್ಷೇತ್ರದಲ್ಲಿ ಉದ್ಯೋಗ ಪಡೆಯಬೇಕು : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಉಡುಪಿ : ಉದ್ಯೋಗಾಕಾಂಕ್ಷಿಗಳು ತಮಗೆ ಆಸಕ್ತಿಯಿರುವ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಹೇಳಿದರು.

ಅವರು ಇಂದು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೌಶಲಭಿವೃಧ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಉಡುಪಿ ಜಿಲ್ಲೆ ವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವ್ ಆಚರಣೆ ಪ್ರಯುಕ್ತ ಆಯೋಜಿಸಿದ್ದ ಸಂಜೀವಿನಿ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರೂ ತಮ್ಮದೇ ಆದ ವಿಶಿಷ್ಟ ಮತ್ತು ವೈಶಿಷ್ಠಪೂರ್ಣ ವ್ಯಕ್ತಿತ್ವ ಹಾಗೂ ಆಸಕ್ತಿಯನ್ನು ಹೊಂದಿದ್ದು, ತಮಗೆ ಸರಿ ಹೊಂದುವ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯುವುದರಿಂದ ಆ ಉದ್ಯೋಗದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾದ್ಯವಾಗಲಿದೆ. 

ಕೋವಿಡ್‌ನಿಂದ ಅನೇಕ ಮಂದಿ ಉದ್ಯೋಗ ವಂಚಿತರಾಗಿದ್ದು, ಉದ್ಯೋಗಾಕಾಂಕ್ಷಿಗಳು ಉದ್ಯೋಗಮೇಳದಲ್ಲಿ ಭಾಗವಹಿಸುವ ಕಂಪೆನಿಗಳಲ್ಲಿ ತಮ್ಮ ವಿದ್ಯಾರ್ಹತೆ ಮತ್ತು ಆಸಕ್ತಿಯಿರುವ ಕ್ಷೇತ್ರದ ಉದ್ಯೋಗಗಳನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಮಾತನಾಡಿ, ಉದ್ಯೋಗ ಮೇಳದ ಕುರಿತ ಅತೀ ಕಡಿಮೆ ಅವಧಿಯಲ್ಲಿ 1558 ಮಂದಿ ಉದ್ಯೋಗಾಕಾಂಕ್ಷಿಗಳು ನೊಂದಾಯಿಸಿಕೊಂಡಿದ್ದು, ಇಂದಿನ ಉದ್ಯೋಗ ಮೇಳದಲ್ಲಿ ಭಾಗವಹಿಸಿರುವ ವಿವಿಧ ಕಂಪನಿಗಳಲ್ಲಿ ಸುಮಾರು 2000 ದಷ್ಟು ಉದ್ಯೋಗ ಲಭ್ಯತೆಗಳಿದ್ದು, ಅಭ್ಯರ್ಥಿಗಳು ಉತ್ತಮ ರೀತಿಯಲ್ಲಿ ತಮ್ಮ ಪ್ರತಿಭೆ ತೋರುವಂತೆ ತಿಳಿಸಿದರು.

ಜಿಲ್ಲಾ ಪಂಚಾಯತ್‌ನ ಗ್ರಾಮೀಣ ಜೀವನೋಪಾಯ ಅಭಿಯಾನದ ಮೂಲಕ ವಿವಿಧ ತರಬೇತಿ ಕಾರ್ಯಕ್ರಮಗಳು, ಕೌಶಲ್ಯ ತರಬೇತಿಯನ್ನು ನೀಡುವ ಮೂಲಕ ಉದ್ಯೋಗ ಒದಗಿಸಲು ಪ್ರಯತ್ನಿಸಲಾಗುತ್ತಿದ್ದು, ಉದ್ಯಮಿಯಾಗು ಎಂಬ ಯೋಜನೆಯಡಿ, ಮೊಬೈಲ್ ಕ್ಯಾಂಟೀನ್, ಚಿಕ್ಕಿ ಘಟಕ ಸ್ಥಾಪನೆಗೆ ನೆರವು ನೀಡಲಾಗಿದ್ದು, ಉದ್ಯೋಗ ಪಡೆಯುವುದರಿಂದ ವ್ಯಕ್ತಿಯ ಆದಾಯ ಮತ್ತು ಜಿಲ್ಲೆಯ ತಲಾ ಆದಾಯ ಹೆಚ್ಚಳವಾಗಲಿದೆ ಎಂದರು.

ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಾಬು, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಜಗದೀಶ್ ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯತ್‌ನ ಗ್ರಾಮೀಣ ಜೀವನೋಪಾಯ ಅಭಿಯಾನದ ಜಿಲ್ಲಾ ವ್ಯವಸ್ಥಾಪಕ ಅವಿನಾಶ್ ಸ್ವಾಗತಿಸಿದರು, ನವ್ಯಾ ವಂದಿಸಿದರು. ಪ್ರಭಾಕರ ಆಚಾರ್ ನಿರೂಪಿಸಿದರು. ಉದ್ಯೋಗಮೇಳದಲ್ಲಿ ಜಿಲ್ಲೆಯ ಮತ್ತು ರಾಜ್ಯದ ವಿವಿಧ 20 ಕ್ಕೂ ಅಧಿಕ ಕಂಪನಿಗಳು ಭಾಗವಹಿಸಿದ್ದವು.

 
 
 
 
 
 
 
 
 
 
 

Leave a Reply