ಉಚ್ಚಿಲ: ಹೃನ್ಮನ ಸೂರೆಗೊಳ್ಳುವ ಅದ್ಭುತ ದೀಪಾಲಂಕಾರಕ್ಕೆ ಚಾಲನೆ

ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಸೋಮವಾರದಿಂದ ನಡೆಯುವ ವೈಭವದ ಉಚ್ಚಿಲ ದಸರಾ ಮಹೋತ್ಸವ ಅಂಗವಾಗಿ ಆಯೋಜಿಸಲಾದ ಹೃನ್ಮನ ಸೂರೆಗೊಳ್ಳುವ ಅದ್ಭುತ ದೀಪಾಲಂಕಾರವನ್ನು ಶನಿವಾರ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ನಾಡೋಜ ಡಾ| ಜಿ. ಶಂಕರ್ ಶ್ರೀದೇವಳದ ರಾಜಗೋಪುರ ಬಳಿ ಸ್ವಿಚ್ ಆನ್ ಮಾಡುವ ಮೂಲಕ ಚಾಲನೆ ನೀಡಿದರು.

ಶ್ರೀದೇವಳದಿಂದ ಎಡಭಾಗದ ಹೆಜಮಾಡಿ ಟೋಲ್ ಗೇಟ್ ಹಾಗೂ ಬಲ ಬದಿಯ ಕಾಪು ದೀಪಸ್ತಂಭದ ತನಕ ಸುಮಾರು 17 ಕಿ. ಮೀ. ವರೆಗೆ ಅದ್ಭುತವಾಗಿ ವಿದ್ಯುದ್ದೀಪಾಲಂಕಾರಗೊಳಿಸಲಾಗಿದೆ.

ದೇವಳ ಪ್ರಾಂಗಣ ಪರಿಸರದಲ್ಲಿ ಮನಸೂರೆಗೊಳ್ಳುವ ದೊಡ್ಡ ಪರದೆಯ ಮೇಲೆ ಮಿರುಗುವ ನವದುರ್ಗೆ ಸಹಿತ ದೇವಿಯ ಚಿತ್ರ ಬಹುವರ್ಣಗಳ ವಿದ್ದುದ್ದೀಪದಲ್ಲಿ ಮಿನುಗಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ನಾಡೋಜ ಡಾ| ಜಿ. ಶಂಕರ್, ಉಚ್ಚಿಲ ದಸರಾವನ್ನು ಅತ್ಯಂತ ಸಂಭ್ರಮದಿಂದ ವಿಶಿಷ್ಟವಾಗಿ ಮಾದರಿಯಾಗಿ ಆಯೋಜಿಸಲಾಗುವುದು. ಕ್ಷೇತ್ರಕ್ಕೆ ಲಕ್ಷಾಂತರ ಮಂದಿ ಭೇಟಿ ನೀಡುವವರಿದ್ದು, ಅವರೆಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಶತವೀಣಾ ವಾದನ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಒಟ್ಟಾರೆ ಉಚ್ಚಿಲ ದಸರಾ ರಾಜ್ಯಕ್ಕೇ ಮಾದರಿಯಾಗಲಿದೆ ಎಂದರು.

ಕೇತ್ರದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ದ.ಕ. ಮೊಗವೀರ ಮಹಾಸಭಾ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಶ್ರೀದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಅಮೀನ್, ಕ್ಷೇತ್ರಾಧ್ಯಕ್ಷ ವಾಸುದೇವ ಸಾಲ್ಯಾನ್, ಮಹಾಜನ ಸಂಘ ಉಪಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್, ಪ್ರಧಾನ ಕಾರ್ಯದರ್ಶಿ ಸುಧಾಕರ ಕಾಂಚನ್, ಸದಸ್ಯರಾದ ಗಂಗಾಧರ ಸುವರ್ಣ ಎರ್ಮಾಳು, ರವೀಂದ್ರ ಶ್ರೀಯಾನ್, ಮಹೋತ್ಸವ ಸಮಿತಿ ಪದಾಧಿಕಾರಿಗಳಾದ ಸತೀಶ ಅಮೀನ್ ಪಡುಕರೆ ಮತ್ತು ಶಂಕರ್ ಸಾಲ್ಯಾನ್, ಶಾಂತಾ ಇಲೆಕ್ಟ್ರಿಕಲ್ಸ್ ನ ಶ್ರೀಪತಿ ಭಟ್ ಉಚ್ಚಿಲ ಮೊದಲಾದವರಿದ್ದರು.

 
 
 
 
 
 
 
 
 
 
 

Leave a Reply