ಉಳ್ಳಾಲ: ಖತರ್ನಾಕ್ ಕಳ್ಳನ ಬಂಧನ

ಸೋಮೇಶ್ವರ ಬೀಚ್ ಬಳಿಯ ಹೋಂ ಸ್ಟೇ ಒಂದಕ್ಕೆ ಬುಧವಾರ‌ ಸಂಜೆ ಕನ್ನ ಹಾಕಿದ್ದ ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಉಳ್ಳಾಲ ಠಾಣೆ ವ್ಯಾಪ್ತಿಯ ಎರಡು ಮನೆಗಳಿಂದ ನಗ, ನಗದು ದೋಚಿದ್ದ ಕಳ್ಳನನ್ನ ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಮೊವಾಝ್ (35) ಬಂಧಿತ . ಆರೋಪಿ ಮೊವಾಝ್ ಕೇರಳದ ಕಣ್ಣೂರಿನ ಪತ್ನಿ ಮನೆಯಲ್ಲೇ ನೆಲೆಸಿದ್ದು ಆಗಾಗ್ಗೆ ಮಂಗಳೂರಿಗೆ ಬಂದು ಕಳ್ಳತನ ನಡೆಸುತ್ತಿದ್ದ ಎನ್ನಲಾಗಿದೆ.ನಿನ್ನೆ ಸಂಜೆ ಸೋಮೇಶ್ವರ ಬಸ್ಸು ತಂಗುದಾಣದ ಬಳಿಯ ಬಾಡಿಗೆ ಮನೆ ನಿವಾಸಿಯಾದ ಪ್ರಶಾಂತ್ ಅವರ ಮನೆ ಹಿಂಬಾಗಿಲ ಚಿಲಕ ಮುರಿದು ಒಳ ನುಗ್ಗಿದ ಮೊವಾಝ್ ಕಪಾಟಿನಲ್ಲಿದ್ದ ಕರಿಮಣಿ ಸರ ಮತ್ತು ಚೈನ್ ಸೇರಿ ಒಟ್ಟು 26 ಗ್ರಾಂ ಚಿನ್ನ ಅಲ್ಲದೆ 3000 ರೂಪಾಯಿ ನಗದು ದೋಚಿದ್ದನು. ಪ್ರಶಾಂತ್ ಅವರು ಪತ್ನಿ , ಮಗನೊಂದಿಗೆ ಉಡುಪಿಗೆ ತೆರಳಿದ್ದ ವೇಳೆ ಪ್ರಕರಣ ನಡೆದಿತ್ತು.ಬುಧವಾರ ಸಂಜೆ 7.15 ರ ವೇಳೆ ಪ್ರಶಾಂತ್ ಅವರು ನೆಲೆಸಿರುವ ಬಾಡಿಗೆ ಮನೆ ಪಕ್ಕದಲ್ಲಿರುವ ನಮೋ ಹೆರಿಟೇಜ್ ಎಂಬ ಹೋಂ ಸ್ಟೇ ಕಟ್ಟಡಕ್ಕೆ ತಲೆಗೆ ಟೊಪ್ಪಿ ಮತ್ತು ಕಣ್ಣಿಗೆ ಕನ್ನಡಕ ಹಾಕಿ ನುಗ್ಗಿದ್ದ ಮೊವಾಝ್ ಬಾಗಿಲನ್ನು ಕಬ್ಬಿಣದ ಸಲಾಕೆಯಲ್ಲಿ ಮುರಿದು ಕನ್ನ ಹಾಕಿರೋದು ಅಲ್ಲಿನ ಸಿಸಿಟಿವಿಯಲ್ಲಿ ವೀಡಿಯೋ ದಾಖಲಾಗಿತ್ತು.

ಹೋಂ ಸ್ಟೇ ಒಳಗಡೆ ತಡಕಾಡಿದ ಆತನಿಗೆ ಅಲ್ಲಿ ಏನೂ ಸಿಕ್ಕಿರಲಿಲ್ಲ.ನಿನ್ನೆ ರಾತ್ರಿ ಉಳ್ಳಾಲ ಮೇಲಂಗಡಿಯ ಕಿರೋಡಿಯನ್ ಕುಟಂಬಸ್ಥರ ದೈವಸ್ಥಾನಕ್ಕೂ ಈತ ಕನ್ನ ಹಾಕಿದ್ದು ಹಿತ್ತಾಳೆಯ ದೈವದ ಪರಿಕರಗಳು ಮತ್ತು ಕಾಣಿಕೆ ಹುಂಡಿಯ ಚಿಲ್ಲರೆ ಹಣವನ್ನ ಕಳವು ನಡೆಸಿದ್ದನು. ಪಕ್ಕದಲ್ಲೇ ಇದ್ದ ದೈವದ ಚಾಕರಿಯವರಾದ ಪ್ರಸಾದ್ ಅವರ ಮನೆಯ ಹಿಂಬಾಗಿಲು ಮುರಿದು ಕಪಾಟಿನಲ್ಲಿದ್ದ 56 ಗ್ರಾಂ ಚಿನ್ನ ದೋಚಿ ಪರಾರಿಯಾಗಿದ್ದನು.ಈ ಬಗ್ಗೆಯೂ ದೈವಸ್ಥಾನದ ಹತ್ತಿರದ ಮನೆಯೊಂದರ ಸಿಸಿಟಿವಿಯಲ್ಲಿ ಕಳ್ಳ ಮೊವಾಝ್ ನ ಚಹರೆ ದಾಖಲಾಗಿತ್ತು.ಆರೋಪಿ ಮೊವಾಝ್ ಈ ಹಿಂದೆ ಉಳ್ಳಾಲದಲ್ಲಿ ನಡೆದಂತಹ ಅನೇಕ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 
 
 
 
 
 
 
 
 

Leave a Reply