ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ವೃತ್ತಿಪರ ಸಂಘಟನೆಯಾಗಿದ್ದು ರಾಜ್ಯದಲ್ಲಿಯೇ ಒಂದು ಮಾದರಿ ಸಂಘಟನೆಯಾಗಿ ಬೆಳೆಯುತ್ತಿದೆ. ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಾಗ ಅದಕ್ಕೆ ಬೇಕಾದ ಮಾಹಿತಿಯನ್ನು ನಮ್ಮ ಸಂಘಟನೆ ನೀಡುತ್ತಿದೆ. ಕೊರೋನಾ ಸಂಕಷ್ಟದ ಸಮಯದಲ್ಲೂ ನಮ್ಮೆಲ್ಲಾ ಸದಸ್ಯರು ದೃತಿಗೆಡದೆ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಜಿಲ್ಲಾಧ್ಯಕ್ಷ ಕರಂಡಾಡಿ ಶ್ರೀಧರ ಶೆಟ್ಟಿಗಾರ್ ಹೇಳಿದರು.ಅವರು ಉಡುಪಿಯ ಜಗನ್ನಾಥ ಸಭಾಭವನದಲ್ಲಿ ಉಡುಪಿ ವಲಯದ 27ನೇ ವಾರ್ಷಿಕ ಮಹಾಸಭೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಸಂಘಟನೆಯಲ್ಲಿ ಅದ್ಭುತ ಶಕ್ತಿ ಇದೆ. ಸಂಘಟನೆಯೊಂದಿಗೆ ನಾವು ತೊಡಗಿಸಿಕೊಂಡಾಗ ಇತರರೊಂದಿಗೆ ನಮ್ಮ ಬಲು ಕೂಡಾ ಹಸನಾಗುವುದು ಎಂದರು. ವಲಯ ಆಯೋಜಿಸಿದ್ದ ಕೃಷಿ ಬದುಕು ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ಪ್ರಸನ್ನ ಪೆರ್ಡೂರು , ಸಂದೀಪ್ ಕಾಮತ್, ಪ್ರದೀಪ್ ಉಪ್ಪೂರ್, ಸಾಗರ್ ದೇವಾಡಿಗ, ಪ್ರಭಾಕರ್ ಕುಲಾಲ್ ಇವರಿಗೆ ಬಹುಮಾನ ವಿತರಿಸಲಾಯಿತು. ಶೈಕ್ಷಣಿಕ ಸಾಧನೆಗೈದವರಿಗೆ ವಿದ್ಯಾನಿಧಿ ನೀಡಲಾಯಿತು.
ಈ ಸಂದರ್ಭದಲ್ಲಿ ವಲಯ ಗೌರವಾಧ್ಯಕ್ಷ ಶಿವ ಕೆ ಅಮೀನ್, ಮಾತೃ ಸಂಸ್ಥೆಯ ಮಾಧ್ಯಮ ಪ್ರತಿನಿಧಿ ಜನಾರ್ದನ್ ಕೊಡವೂರು, ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಕೊಳಲಗಿರಿ ಉಪಸ್ಥಿತರಿದ್ದರು. ವಲಯಾಧ್ಯಕ್ಷ ಪ್ರಕಾಶ್ ಕೊಡಂಕೂರ್ ಸ್ವಾಗತಿಸಿದರು. ಕಾರ್ಯದರ್ಶಿ ಸುಕೇಶ್ ಅಮೀನ್ ವಂದಿಸಿದರು. ರಾಘವೇಂದ್ರ ನಿರೂಪಿಸಿದರು.