ಶ್ರೀಕ್ಷೇತ್ರ ಬಂಟಕಲ್ಲು – ಶ್ರೀದುರ್ಗಾಹೋಮ – ಆರ್‌ಎಸ್‌ಬಿ ಯುವವೃಂದದಿoದ ಸಾಧಕರಿಗೆ ಸನ್ಮಾನ

ಶಿರ್ವ:-ಸಮರ್ಥ ಮಾರ್ಗದರ್ಶನದ ಕೊರತೆಯಿಂದ ಯುವ ಸಮುದಾಯ ದುಶ್ಚಟ, ವ್ಯಸನ, ದಿಕ್ಕುದಿಸೆ ಇಲ್ಲದೆ ಓಡಾಡುತ್ತಿದೆ. ಬಾಲ್ಯದಿಂದಲೇ ಉತ್ತಮ ಸಂಸ್ಕಾರಯುಕ್ತ ಶಿಕ್ಷಣ, ಅವಕಾಶಗಳ ಪರಿಚಯ, ಸಾಂಘಿಕ ಜೀವನ ಮೌಲ್ಯಗಳ ಮಾಹಿತಿ ನೀಡುವುದು ಅಗತ್ಯ. ಸದೃಢ ಯುವಶಕ್ತಿಯ ನಿರ್ಮಾಣಕ್ಕೆ ಪ್ರೀತಿ,ವಾತ್ಸಲ್ಯ ಸಮರ್ಥ ಮಾರ್ಗದರ್ಶನ ಅಗತ್ಯ ಎಂದು ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ, ಬೆಂಗಳೂರು ಇದರ ಸದಸ್ಯ ಸದಾಶಿವ ಪ್ರಭು ಎಳ್ಳಾರೆ ನುಡಿದರು.

ಅವರು ರವಿವಾರ ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೆಶ್ವರೀ ದೇವೀ ಸನ್ನಿಧಿಯಲ್ಲಿ ರಾಜಾಪುರ ಸಾರಸ್ವತ ಯುವವೃಂದ ಇದರ ಆಶ್ರಯದಲ್ಲಿ ೨೬ನೇ ವರ್ಷದ “ದುರ್ಗಾಹೋಮ” ಸೇವೆ, ಧಾರ್ಮಿಕ ಅನುಷ್ಠಾನಗಳು ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಿದ ಸಭಾ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡುತ್ತಾ, ಸಾರಸ್ವತ ಪರಂಪರೆಯ ಸಾತ್ವಿಕ ಸಮಾಜದವರಾದ ನಮಗೆ ಸರಸ್ವತಿಯ ಅನುಗ್ರಹ ರಕ್ತಗತವಾಗಿದ್ದು, ಪ್ರತಿಭಾನ್ವಿತರು ಸರಕಾರದ ವಿವಿಧ ಸೌಲಭ್ಯಗಳನ್ನು ಬಳಸಿಕೊಂಡು, ಪೂರಕ ಶಿಕ್ಷಣವನ್ನು ಪಡೆದು ವಿವಿಧ ಸರಕಾರಿ ಹುದ್ದೆಗಳಿಗೆ, ದೇಶ ರಕ್ಷಣಾ, ಬ್ಯಾಂಕಿoಗ್, ತತ್ಸಮಾನ ವಿವಿಧ ಕ್ಷೇತ್ರಗಳ ಕಡೆಗೆ ಗಮನ ಹರಿಸುವಂತೆ ಕರೆಯಿತ್ತರು.

ಮುಖ್ಯ ಅತಿಥಿಗಳಾಗಿ ಶ್ರೀದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಆಡಳಿತ ಮಂಡಳಿ ಅಧ್ಯಕ್ಷ ಜಯರಾಮ್ ಪ್ರಭು ಗಂಪದಬೈಲು, ನೀರೆ ಗ್ರಾ,ಪಂ.ಅಭಿವೃದ್ಧಿ ಅಧಿಕಾರಿ ಅಂಕಿತಾ ಭಾಗವಹಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಸ್ಪತ್ರೆಯ ಡಿಸ್ಟಿçಕ್ಟ್ ಸರ್ಜನ್ ಡಾ.ಮಧುಸೂದನ ನಾಯಕ್, ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕ ದಿನೇಶ್ ನಾಯಕ್ ಮುದರಂಗಡಿ, ಪಿಎಚ್‌ಡಿ ಗೌರವ ಸಾಧಕ ಪ್ರೊ.ವಿಠಲ್ ನಾಯಕ್, ಪುರಾತತ್ವ ಸಂಶೋಧಕ ಸುಭಾಷ್ ನಾಯಕ್ ಬಂಟಕಲ್ಲು ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ವಿವಿಧ ಕ್ರೀಡಾ ಸ್ಫರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಕ್ರೀಡಾ ಕಾರ್ಯದರ್ಶಿ ಪ್ರೀತಮ್ ಪಾಟ್ಕರ್ ವಿಜೇತರ ಪಟ್ಟಿ ವಾಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವೃಂದದ ಅಧ್ಯಕ್ಷ ರಾಘವೇಂದ್ರ ನಾಯಕ್ ಪಾಲಮೆ ವಹಿಸಿ ಸ್ವಾಗತಿಸಿದರು. 

 
 
 
 
 
 
 
 
 

Leave a Reply