ಉಡುಪಿ: ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಬಂದವರನ್ನು ಸುಲಭವಾಗಿ ಗುರುತಿಸಲು ಮತ್ತು ಅವರ ಚಟುವಟಿಕೆಗಳ ಕುರಿತು ನಿಗಾ ಇರಿಸುವ ಸಲುವಾಗಿ ಹೋಂ ಐಸೋಲೇಶನ್ ನಲ್ಲಿರುವವರ ಮನೆಗಳನ್ನು ಸೀಲ್ ಡೌನ್ ಮಾಡುವ ಕ್ರಮವನ್ನು ಆರಂಭಿಸಲಾಗಿದೆ.
ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ನೇತೃತ್ವದಲ್ಲಿ ಇಂದು ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತರಿರುವ ಮನೆಯ ಸುತ್ತ ಎಚ್ಚರಿಕೆ ಸೂಚಿಸುವ ಟೇಪ್ ಕಟ್ಟಲಾಯಿತು.ಮನೆಯಲ್ಲಿದ್ದ ಸೋಂಕಿತರ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಲಾಗಿದ್ದು, ಹೊರಗೆ ಬಾರದೇ ಮನೆಯಲ್ಲಿಯೇ ಇದ್ದುಕೊಂಡು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಯಿತು.
ಕೋವಿಡ್ ಮೊದಲ ಅಲೆಯ ವೇಳೆ ಚಾಲ್ತಿಯಲ್ಲಿದ್ದ ಈ ಕ್ರಮವನ್ನು ಎರಡನೇ ಅಲೆಯ ಸಂದರ್ಭದಲ್ಲಿ ಕೈ ಬಿಡಲಾಗಿತ್ತು. ಇದರಿಂದ ಸೋಂಕಿತರ ಮನೆ ಯಾವುದು, ಅವರು ಅಥವಾ ಆ ಮನೆಗಳವರು ಹೊರಗೆ ಪೇಟೆಗಳಲ್ಲಿ ತಿರುಗಾಡುತ್ತಿದ್ದಾರೆಯೇ ಎಂಬುದು ಯಾರಿಗೂ ತಿಳಿಯುತ್ತಿರಲಿಲ್ಲ. ಅಷ್ಟೇ ಅಲ್ಲ ಸ್ವತಃ ಜಿಲ್ಲಾಧಿಕಾರಿಗೂ ಸೋಂಕಿತರು ಮನೆಯಿಂದ ಹೊರಗೆ ಬಂದು ಸುತ್ತಾಡುತ್ತಾರೆ ಎಂಬ ದೂರುಗಳು ಬರುತ್ತಿದ್ದವು. ಇವೆಲ್ಲದಕ್ಕೂ ಕಡಿವಾಣ ಹಾಕಲು, ಗ್ರಾಮಗಳನ್ನು ಕೋವಿಡ್ ಮುಕ್ತ ಮಾಡಲು ಈ ಸೀಲ್ ಡೌನ್ ಕ್ರಮವನ್ನು ಮತ್ತೊಮ್ಮೆ ಆರಂಭಿಸಲಾಗಿದೆ.