ನಮ್ಮ ಭೂಮಿಯ ರಾಮಾಂಜಿಗೆ ಮಹಾತ್ಮಗಾಂಧಿ ಶಾಂತಿ ಪ್ರತಿಷ್ಠಾನದ ವರ್ಷದ ವ್ಯಕ್ತಿ ಪುರಸ್ಕಾರ

ಮಂಗಳೂರಿನ ಮಹಾತ್ಮಗಾಂಧಿ ಶಾಂತಿ ಪ್ರತಿಷ್ಠಾನದ ವತಿಯಿಂದ ಕೊಡ ಮಾಡುವ `ವರ್ಷದ ವ್ಯಕ್ತಿ ಗೌರವ -೨೦೨೨ ‘ ಪ್ರಶಸ್ತಿಗೆ ನಮ್ಮಭೂಮಿಯ ರಾಮಾಂಜಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯನ್ನು ಅ.2ರಂದು ಸಂಸ್ಥೆಯ ಕಾರ್ಯಾಲಯದಲ್ಲಿ ನಡೆಯುವ ಮಹಾತ್ಮಗಾಂಧಿ ದಿನಾಚರಣೆಯಲ್ಲಿ ಪ್ರದಾನ ಮಾಡಲಾಗುವುದು.

ರಾಮಾಂಜಿ ಅವರು ದುಡಿಯುವ ಮಕ್ಕಳ ಅಂತರಾಷ್ಟ್ರೀಯ ಸಂಸ್ಥೆ `ನಮ್ಮ ಭೂಮಿಯ ‘ಯ ರಾಯಭಾರಿಯಾಗಿದ್ದು, ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪತ್ರಿಕೋದ್ಯಮದಲ್ಲಿ ಪೂರೈಸಿ ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ನಾಟಕ, ಯಕ್ಷಗಾನ, ಸಂಗೀತ, ಸಾಹಿತ್ಯ, ಲಲಿತಕಲೆ ಮೊದಲಾದ ಹವ್ಯಾಸಗಳೊಂದಿಗೆ ಸಮಾಜಕ್ಕಾಗಿ ತನ್ನದೇ ಆದ ವಿಶಿಷ್ಠ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಿರುವ ರಾಮಾಂಜಿ ನಾಡಿನ ವಿವಿಧ ಸಂಘ ಸಂಸ್ಥೆಗಳಲ್ಲಿ ಕಳೆದ ೨೦ವರ್ಷಗಳಿಂದ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.

ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಹಲವಾರು ವರ್ಷ ವಿಭಿನ್ನ ವೇಷ ಧರಿಸಿ ಬಂದ ೧೦ ಲಕ್ಷಕ್ಕೂ ಅಧಿಕ ಮೊತ್ತವನ್ನು ಬಡ ಮಕ್ಕಳ ಚಿಕಿತ್ಸೆ, ಸಂಘ ಸಂಸ್ಥೆಗಳಿಗೆ ಉದಾರವಾಗಿ ದಾನ ಮಾಡಿ ಮಾನವೀಯತೆಯನ್ನು ಮೆರೆದ ಒಬ್ಬ ಸಜ್ಜನ.
ರಾಜ್ಯ ಯುವ ಸಂಘಟನೆಗಳ ಒಕ್ಕೂಟದಿಂದ 75ನೇ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಅಂಗವಾಗಿ ರಂಗಭೂಮಿ ಕ್ಷೇತ್ರದ ಸಾಧನೆಗಾಗಿ ಕೊಡ ಮಾಡುವ `ರಾಜ್ಯ ಯುವ ಪ್ರಶಸ್ತಿ’, `ಪ್ರಜಾವಾಣಿ ಸಾಧಕ ಯುವ ಪ್ರಶಸ್ತಿ ‘ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.

ಕೊರೊನಾ ಕಾಲದಲ್ಲಿ ಆಹಾರ, ವೈದ್ಯಕೀಯಮ ರಕ್ತದಾನದಿಂದ ತೊಡಗಿ ಶವ ಸಂಸ್ಕಾರದವರೆಗೆ ರಾಮಾಂಜಿಯವರು ಸಲ್ಲಿಸಿದ ಸೇವಾ ಕಾರ್ಯ ಸ್ಮರಣೀಯ. ಅಂಡಮಾನ್ ನಿಕೋಬರ್ ಸುನಾಮಿ ದುರಂತ, ಉತ್ತರ ಕರ್ನಾಟಕ, ಕೊಡಗು, ಕೇರಳ, ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಉಂಟಾದ ನೆರೆ ಸಂಕಷ್ಟದ ಸಂದರ್ಭಗಳಲ್ಲಿ `ನಮ್ಮ ಸಭಾ ‘ ಹಾಗೂ ವಿವಿಧ ಸೇವಾ ತಂಡಗಳ ಮೂಲಕ ಸೇವಾ ಕಾರ್ಯ ಸಲ್ಲಿಸಿದ್ದಾರೆ.
ಮಕ್ಕಳ ಹಕ್ಕುಗಳ ರಕ್ಷಣೆ, ಪ್ಲಾಸ್ಟಿಕ್ ಮುಕ್ತ ಸಮಾಜ, ಮಾದಕ ದ್ರವ್ಯ ವಿರೋಧಿ ಆಂದೋಲನ, ಮಹಿಳಾ ಶೋಷಣೆಯಂತಹ ಜ್ವಲಂತ ಸಮಸ್ಯೆಗಳ ಕುರಿತು ಬೀದಿ ನಾಟಕಗಳ ಮೂಲಕ ಜನಜಾಗೃತಿ ಮೂಡಿಸುತ್ತಾ ಬಂದಿದ್ದಾರೆ.
ಮAಗಳೂರು ವಿವಿಯ ಶೈಕ್ಷಣಿಕ ಮಂಡಳಿಗೆ ನಾಮನಿರ್ದೇಶಿತ ಸದಸ್ಯರಾಗಿ ೨೦೧೩-೧೪ರಲ್ಲಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದಾರೆ. ಉಡುಪಿ ಜಿಲ್ಲಾ ಪ್ರಾಣಿದಯಾ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ 2015ರಲ್ಲಿ ಉಡುಪಿ ಜಿಲ್ಲಾಧಿಕಾರಿಗಳಿಂದ ನೇಮಕಗೊಂಡಿದ್ದಾರೆ. ಕಳೆದ 20 ವರ್ಷಗಳಿಂದ ನಮ್ಮ ಭೂಮಿ, ಭೀಮಾ ಸಂಘ, ನಮ್ಮ ಸಭಾ, ಸಮುದಾಯ, ಕರ್ನಾಟಕ ಜನಶಕ್ತಿ, ಚರಕ, ಕರ್ನಾಟಕ ವಿದ್ಯಾರ್ಥಿ ಸಂಘಟನೆ, ಭೂಮಿ ಮತ್ತುಹಕ್ಕು ವಂಚಿತರ ಹೋರಾಟ ಸಮಿತಿ, ಪಶ್ಚಿಮ ಘಟ್ಟಗಳ ಪರಿಸರ ಹೋರಾಟ ಸಮಿತಿ, ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಮುಂತಾದ ಜನಪರ ಚಳುವಳಿಗಳಲ್ಲಿ ತನ್ನನ್ನು ತೊಡಗಿಸಿಕೊಂಡು ವಿಶ್ವಮಾನವತೆಯ ಪಥದಲ್ಲಿ ನಡೆಯುತ್ತಿರುವ ರಾಮಾಂಜಿಗೆ ಸೇವಾ ನೆಲವೇ ಹುಟ್ಟೂರು, ಮಾನವರೆಲ್ಲರೂ ಬಂಧುಗಳ, ಪಶುಪಕ್ಷಿ -ಗಿಡಮರಗಳೇ ಬಾಂಧವರು.

 
 
 
 
 
 
 
 
 
 
 

Leave a Reply