ಕೋವಿಡ್19 ಚಿಕಿತ್ಸೆ ಆಯುಷ್ಮಾನ್ ಯೋಜನೆಯಡಿ ಸಂಪೂರ್ಣ ಉಚಿತವಾಗಿರುತ್ತದೆ – ಈ ಬಗ್ಗೆ ಜನರಿಗೆ ಮನವರಿಕೆ ಮಾಡಿ – ಶಾಸಕ ರಘುಪತಿ ಭಟ್ ಸೂಚನೆ

ಉಡುಪಿ: ಕೋವಿಡ್ 19 ಸೋಂಕು ಧೃಡಪಟ್ಟು ಚಿಕಿತ್ಸೆಗಾಗಿ ಯಾವುದೇ ಖಾಸಗಿ ಆಸ್ಪತ್ರೆಗೆ ದಾಖಲಾದರು ಅವರಿಗೆ ಚಿಕಿತ್ಸೆ ಆಯುಷ್ಮಾನ್ ಯೋಜನೆಯಡಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಈ ಬಗ್ಗೆ ಮಾಹಿತಿಯ ಕೊರತೆಯಿಂದಾಗಿ ಬಡಜನರು ಹೆಚ್ಚಿನ ಮೊತ್ತ ಪಾವತಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನವರು ಆಸ್ಪತ್ರೆಗೆ ದಾಖಲಾಗಲೂ ಹಿಂದೇಟು ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೋವಿಡ್ ಕಾರ್ಯಪಡೆ ಗ್ರಾಮ ಗ್ರಾಮಗಳಲ್ಲಿ ಈ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು ಎಂದು ಶಾಸಕ ರಘುಪತಿ ಭಟ್ ಸೂಚಿಸಿದರು.

ಉಡುಪಿ ಜಿಲ್ಲೆಯ ಉಡುಪಿ ಮತ್ತು ಕಾಪು ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಕೋವಿಡ್ – 19 ನಿಯಂತ್ರಣ ಕಾರ್ಯಪಡೆಗಳ ಕಾರ್ಯನಿರ್ವಹಣೆಯ ಬಗ್ಗೆ ಮಂಗಳವಾರ ಜಿಲ್ಲಾ ಪಂಚಾಯತ್ ನಲ್ಲಿ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.

ರೋಗ ಲಕ್ಷಣಗಳಿರುವ ಸೋಂಕಿತರು ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕು. ಖಾಸಗಿ ಆಸ್ಪತ್ರೆಗೆ ನೇರವಾಗಿ ದಾಖಾಲಾದರು ತಕ್ಷಣದಲ್ಲಿ ಕೋವಿಡ್ ಕಾಲ್ ಸೆಂಟರ್ ಗೆ ಫೋನ್ ಮಾಡಿ ಮಾಹಿತಿ ನೀಡಿ ಶಿಫಾರಸ್ಸು ಪಡೆಯಬೇಕು. ಅವರಿಗೆ ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಈ ಬಗ್ಗೆ ಜನರಲ್ಲಿ ಮಾಹಿತಿಯ ಕೊರತೆ ಇದೆ.ಇದನ್ನು ಜನರಿಗೆ ಮನವರಿಕೆ ಮಾಡಿ ರೋಗ ಲಕ್ಷಣಗಳಿರುವ ಸೋಂಕಿತರು ಮನೆಯಲ್ಲಿ ಉಳಿಯದೆ ಆಸ್ಪತ್ರೆಗೆ ದಾಖಲಿಸುವಲ್ಲಿ ಕೋವಿಡ್ ಕಾರ್ಯಪಡೆ ಸನ್ನದ್ಧರಾಗಲು ತಿಳಿಸಿದರು.

ಆಯುಷ್ಮಾನ್ ಯೋಜನೆಯ ಪ್ರಯೋಜನ ಪಡೆಯುವಲ್ಲಿ ಯಾರಿಗಾದರೂ ಸಮಸ್ಯೆಗಳಾದ್ದಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯ ಆಯುಷ್ಮಾನ್ ನೋಡಲ್ ಅಧಿಕಾರಿಯವರಾದ ಡಾ. ಸಚ್ಚಿದಾನಂದರನ್ನು (8197011421) ಸಂಪರ್ಕಿಸಬಹುದು ಎಂದು ತಿಳಿಸಿದರು.

 
 
 
 
 
 
 
 
 

Leave a Reply