ಉಡುಪಿ: ಉಡುಪಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಹಿರಿಯಡ್ಕದ ಸಮೀಪ ಇರುವ ಸ್ವರ್ಣ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ನದಿತಟದಲ್ಲಿರುವ ಪುತ್ತಿಗೆ ಮೂಲಮಠ ಭಾಗಶಃ ಜಲಾವೃತಗೊಂಡಿದೆ. ಪುತ್ತಿಗೆ ವಿದ್ಯಾಪೀಠ ಪ್ರವಾಹದ ನೀರಿಗೆ ಸಿಲುಕಿದ್ದು, ಮಠದ ಗೋಶಾಲೆಗೂ ನೀರು ನುಗ್ಗಿದೆ. ಸದ್ಯ ಮಠದ ಆಸುಪಾಸಿನ ಸ್ಥಳೀಯರ ಸಹಾಯದಿಂದ ಗೋಶಾಲೆಯಲ್ಲಿರುವ ನೂರಾರು ಗೋವುಗಳನ್ನು ಸ್ಥಳಾಂತರ ಮಾಡಿ ರಕ್ಷಿಸುವ ಕಾರ್ಯ ನಡೆಯುತ್ತಿದೆ. ಆದರೆ ಬಿಡದೆ ಸುರಿಯುತ್ತಿರುವ ಮಳೆ ಕಾರ್ಯಾಚರಣೆಗೆ ಅಡ್ಡಿಯುಂಟು ಮಾಡುತ್ತಿದೆ.
ವರುಣನಆರ್ಭಟಕ್ಕೆ ಹಿರಿಯಡ್ಕ ಸಮೀಪದ ಬಜೆ ಪ್ರದೇಶದಲ್ಲಿ ಮನೆಯೊಂದು ಮುಳುಗಡೆಗೊಂಡಿದೆ. ಇಷ್ಟಲ್ಲದೆ ಎರಡು ದನದ ಕೊಟ್ಟಿಗೆಗಳು ಕೂಡ ಕುಸಿದಿದ್ದು, ಅನೇಕ ಮನೆಗಳು ಅಪಾಯದಂಚನಲ್ಲಿವೆ. ಇಷ್ಟಲ್ಲದೆ ಈ ಭೀಕರ ಮಳೆಗೆ ಶೀರೂರು ಪರಿಸರದಲ್ಲಿಯೂ ನದಿಯ ನೀರಿನ ಮಟ್ಟ ಏರುತ್ತಿದ್ದು, ಇನ್ನೇನು ಮಠವು ಜಲಾವೃತವಾಗುವ ಆತಂಕ ಎದುರಾಗಿದೆ. ಇಲ್ಲಿನ ಗೋಶಾಲೆಯಲ್ಲಿಯೂ ನೂರಾರು ಗೋವುಗಳಿವೆ. ಶೀರೂರು ಬಳಿಯೂ ನದಿಯ ಆಸುಪಾಸಿನ ಮನೆಗಳು ಅಪಾಯದಲ್ಲಿವೆ. ಈಗಾಗಲೇ ಎರಡು ಮನೆಗಳು ಕುಸಿದ ಹಾಗೂ ಕೆಲವೆಡೆ ಜಾನುವಾರುಗಳು ನೆರೆಯಲ್ಲಿ ಕೊಚ್ಚಿ ಹೋದ ಬಗ್ಗೆ ಮಾಹಿತಿ ದೊರೆತಿದೆ.
