ಗೋ-ರ(ಪ)ಥದಲ್ಲಿ ಪೆರ್ಡೂರಿನ ಗಣೇಶ.

ಪೆರ್ಡೂರು  ಶ್ರೀ ಅನಂತ ಪದ್ಮನಾಭ ದೇವರು ನೆಲೆಸಿ, ಊರನ್ನು ಪೊರೆಯುತ್ತಾ, ಸಂತಾನ ಕರುಣಿಸುತ್ತಾ, ಭಕ್ತರು ಅರ್ಪಿಸೋ ‘ಕದಳಿ’ ಅಂದರೆ ಬಾಳೆಹಣ್ಣನ್ನು ನೈವೇದ್ಯವಾಗಿ ಸ್ವೀಕರಿಸಿತ್ತಾ ಕದಳೀಪ್ರಿಯನಾಗಿ ಸಕಲ ಇಷ್ಟಾರ್ಥವನ್ನು ಸಿದ್ಧಿಸುತ್ತಿದ್ದಾನೆ. ಹೀಗೆ ಸ್ಥಳಪುರಾಣದ ಬಗ್ಗೆ ನೀವೆಲ್ಲಾ ತಿಳಿದಿರುವಾಗ, ಇವತ್ತು ಅಂದರೆ ಇಂದಿನ ಚೌತಿಯ ದಿನ ನಡೆದಂತಹ ಗಣೇಶನ ವಿಸರ್ಜನ ಮೆರವಣಿಗೆಯಲ್ಲಿ ನಡೆದ ಕೌತುಕ ಕ್ಷಣ.

ಪೆರ್ಡೂರು ರಥ ಬೀದಿಯ ಒಂದು ಪಾರ್ಶ್ವ ರಾಷ್ಟ್ರೀಯ ಹೆದ್ದಾರಿ 169A ಆಗಿರೋದು ವಿಪರ್ಯಾಸ. ಇಕ್ಕಟ್ಟಿನ ನಡುವೆಯೂ ದಿನಕ್ಕೆ ಸಹಸ್ರ ಸಂಖ್ಯೆಯಲ್ಲಿ ವಾಹನಗಳು ತಿರುಗುತ್ತಾ ಇದ್ದರು, ಸ್ವಚ್ಛಂದವಾಗಿ ರಸ್ತೆಯ ಮೇಲೆ ಈ ಪುಟಾಣಿ ಕರುಗಳಿಂದ ಹಿಡಿದು, ದೊಡ್ಡ ದೊಡ್ಡ ದನಗಳು ಒಳ್ಳೆ ‘ಸ್ಪೀಡ್ ಬ್ರೇಕರ್ಸ್ ಅಥವಾ ಬ್ರೇಕ್ ಇನ್ಸ್ಪೆಕ್ಟರ್ಸ್’ ತರ ಅಡ್ಡಲಾಗಿ ಬಂದು, ಇಕ್ಕಟ್ಟಾದ ರಸ್ತೆಯಲ್ಲಿ ಸ್ವಾಭಾವಿಕ ಹಂಪ್ಸ್ ಗಳ ತರ ಸುಲಭ ಸಂಚಾರ, ನಿಧಾನಗತಿಯ ಸಂಚಾರಕ್ಕೆ ಅನುವು ಮಾಡಿಕೊಟ್ಟು, ವೇಗದ ಸಂಚಾರದಿಂದ ಆಗೋ ಅನಾ ಹುತಕ್ಕೆ ಇವು ತಿಳಿಹೇಳುವಂತೆ ದಾರಿಯ ಮೇಲೆ ಮುದ್ದಾಗಿ, ಒಟ್ಟೊಟ್ಟಾಗಿ ನಿಂತಿರುತ್ತವೆ.  ಈ ದನ-ಕರುಗಳು ನಾನು ಸಾಕಷ್ಟು ಬಾರಿ ಈ ಮಾರ್ಗದಲ್ಲಿ ಸಂಚರಿಸುವಾಗ ಕಾಣ ಸಿಗುತ್ತವೆ, ಮತ್ತೆ ಅವುಗಳು ಹಾರ್ನ್ ಗೂ ಜಗ್ಗದೆ, ಅವುಗಳ ಹತ್ತಿರ ಹೋಗಿ ‘ಹೈ ಹೈ’ ಎಂದು ಬಾಯಲ್ಲಿ ಹೇಳಿದ ಮೇಲೆ ದಾರಿ ಬಿಡುತ್ತವೆ. ಇವತ್ತು ನಡೆದ ಗೋ ರ(ಪ)ಥದ ಮೆರವಣಿಗೆಯ ಅದ್ಭುತ ಕ್ಷಣವನ್ನು ಫೋಟೋಗ್ರಾಫರ್ ಶ್ರೀ ಪ್ರಸನ್ನ ಪೆರ್ಡೂರು ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿದಿದ್ದಾರೆ, ಇದನ್ನು ನೋಡಿದ ನನಗೆ ತುಂಬಾ ಸಂತೋಷವಾಯಿತು. ಅವರೇ ಹೇಳೋವಂತೆ ಇವತ್ತು ನಡೆದ ವಿಸರ್ಜನಾ ಮೆರವಣಿಗೆಯಲ್ಲಿ ‘ಜನಗಳಿ ಗಿಂತ ದನಕರುಗಳೇ’ ಜಾಸ್ತಿ ಇದ್ದವು, ಅವುಗಳ ಆ ಉತ್ಸಾಹ ಕಂಡು ಸಾಕ್ಷಾತ್ ಪರಮಾತ್ಮನೇ ನಮ್ಮ ಮುಂದೆ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಿದ್ದಾನೆ ಎಂದು ಭಾಸವಾಗುತ್ತಿತ್ತು.
ವೇದ ಮಂತ್ರ ಘೋಷದಂತೆ ‘ಅಂಬಾ, ಅಂಬಾ’ ಎಂದು ಹೇಳುತ್ತಾ ಇಡೀ ಒಂದು ಸುತ್ತು ಮೆರವಣಿಗೆಯಲ್ಲಿ ಜೊತೆಯಾಗಿದ್ದಿದ್ದು ವಿಶೇಷವೇ ಸರಿ ಎಂದು ತಿಳಿಸಿದರು. ಹೀಗೆ, ದನಕರುಗಳು ಉತ್ಸಾಹದಿಂದ ಜನರೊಂದಿಗೆ ಕೂಡಿಕೊಂಡು ಹಬ್ಬದ ಸಡಗರವನ್ನು ಹೆಚ್ಚಿಸಿದ್ದು ಕಲಿಯುಗದಲ್ಲಿ ಭಗವಂತನ ಇರುವಿಕೆಯನ್ನು ಅಕ್ಷರಶಃ ಬಿಂಬಿಸಿದಂತೆ ಕಾಣುತ್ತಲಿತ್ತು. ಜೈ ಗಣೇಶ- ಜೈ ಗೋ ಮಾತೆ.

Leave a Reply