ಭಯೋತ್ಪಾದನೆ, ಉಗ್ರವಾದಗಳು ರಾಜಕೀಯ ಅಸ್ತ್ರಗಳಲ್ಲ – ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ

ನ್ಯೂಯಾರ್ಕ್: ಭಯೋತ್ಪಾದನೆ, ಉಗ್ರವಾದಗಳು ರಾಜಕೀಯ ಅಸ್ತ್ರಗಳಲ್ಲ. ಅವುಗಳನ್ನು ಬಳಸುವುದನ್ನು ರಾಷ್ಟ್ರಗಳು ನಿಲ್ಲಿಸಬೇಕು. ಭಯೋತ್ಪಾದನೆಯನ್ನು ರಾಜಕೀಯ ಅಸ್ತ್ರವಾಗಿ ಬಳಸುವ ರಾಷ್ಟ್ರಗಳಿಗೂ ಸಂಕಷ್ಟ ತಪ್ಪಿದ್ದಲ್ಲ. ಅದು ಎರಡಲಗಿನ ಕತ್ತಿ ಎಂಬುದನ್ನು ನೆನಪಿಟ್ಟುಕೊಳ್ಳಬೇಕು’ಎಂದು ಮೋದಿ ಪಾಕಿಸ್ತಾನ ವಿರುದ್ಧ ವಾಗ್ದಾಳಿ ನಡೆಸಿದರು. 

ಭಯೋತ್ಪಾದನೆಯನ್ನು ರಾಜಕೀಯ ಅಸ್ತ್ರವಾಗಿ ಬಳಸುವ ಪ್ರತಿಗಾಮಿ ಧೋರಣೆಯ ರಾಷ್ಟ್ರಗಳು ತಮ್ಮ ವಿನಾಶವನ್ನು ತಾವೇ ಆಹ್ವಾನಿಸಿಕೊಳ್ಳುತ್ತವೆ ಎಂದು ವಿಶ್ವಸಂಸ್ಥೆಯ ಮಹಾಧಿವೇಶನದ ಜಾಗತಿಕ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನಕ್ಕೆ ಚಾಟಿ ಬೀಸಿದ್ದಾರೆ. ಜತೆಗೆ ಚೀನಾದ ಆಕ್ರಮಣಕಾರಿ ನೀತಿಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿ, ಬಿಸಿ ಮುಟ್ಟಿಸಿದ್ದಾರೆ. ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡು ಭಾರತಕ್ಕೆ ಭದ್ರತಾ ಸವಾಲು ಸೃಷ್ಟಿಸಿರುವ ತಾಲಿಬಾನ್ ಸಂಘಟನೆಗೂ ಅವರು ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದಾರೆ.

ಭಯೋತ್ಪಾದನೆಗೆ ಸಂಬಂಧಿಸಿ ಜಾಗತಿಕವಾಗಿ ವಿಸõತ ಪ್ರತಿಕ್ರಿಯೆ ಬೇಕಾಗಿದೆ. ಎಲ್ಲ ರಾಷ್ಟ್ರಗಳು ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಮುಕ್ತವಾಗಿ ಕೈಜೋಡಿಸಬೇಕು. ಅಫ್ಘಾನಿಸ್ತಾನದ ನೆಲವನ್ನು ಭಯೋತ್ಪಾದನೆಗೆ ಬಳಸದಂತೆ ಖಾತರಿಪಡಿಸಬೇಕು ಎಂದು ಮೋದಿ ವಿಶ್ವ ರಾಷ್ಟ್ರಗಳನ್ನು ಎಚ್ಚರಿಸಿದರು.

ಅಫ್ಘಾನಿಸ್ತಾನದ ಅರಾಜಕತೆಯನ್ನೇ ಬಂಡವಾಳ ಮಾಡಿಕೊಳ್ಳಲು ಕೆಲ ರಾಷ್ಟ್ರಗಳು ಹುನ್ನಾರ ನಡೆಸಿವೆ ಎನ್ನುವ ಮೂಲಕ ಪಾಕಿಸ್ತಾನ ಹಾಗೂ ಚೀನಾಗೆ ಚುರುಕು ಮುಟ್ಟಿಸಿದರು. ಸ್ವಹಿತಾಸಕ್ತಿ ಕಾಪಾಡಲು ಇಂತಹ ರಾಷ್ಟ್ರಗಳು ಅಫ್ಘನ್ ಸನ್ನಿವೇಶವನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆ. ಅಲ್ಲಿನ ಅಲ್ಪಸಂಖ್ಯಾತರಿಗೆ ಈಗ ನೆರವಿನ ಅವಶ್ಯಕತೆ ಇದೆ. ಅದನ್ನು ಪೂರ್ಣಗೊಳಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದು ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತದಲ್ಲಿ ಲಸಿಕೆ ಉತ್ಪಾದಿಸಿ: ಶತಮಾನದ ಅವಧಿಯಲ್ಲಿ ಎಂದೂ ಅನುಭವಿಸದ ಅತ್ಯಂತ ಕೆಟ್ಟ ಸಾಂಕ್ರಾಮಿಕ ರೋಗವನ್ನು ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಜಗತ್ತು ಎದುರಿಸಿದೆ. ಈ ಸಂಕಷ್ಟದಿಂದ ಜನರನ್ನು ಪಾರು ಮಾಡಲು ಅವರಲ್ಲಿ ವಿಶ್ವಾಸ ತುಂಬಲು ಲಸಿಕೆ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಲಸಿಕೆ ಉತ್ಪಾದನೆ ಮಾಡುವುದಕ್ಕೆ ಭಾರತಕ್ಕೆ ಬನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ವೇದಿಕೆಯಿಂದ ಜಾಗತಿಕ ಫಾರ್ವ ಕಂಪನಿಗಳಿಗೆ ಕರೆ ನೀಡಿದರು. ಭಾರತದಲ್ಲಿ 12 ವರ್ಷ ಮೇಲ್ಪಟ್ಟವರಿಗೆ ನೀಡುವುದಕ್ಕೆ ಇದೇ ಮೊದಲ ಬಾರಿ ಡಿಎನ್​ಎ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನೆ ಮಾಡುವಲ್ಲಿ ಭಾರತ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಜಗತ್ತಿಗೆ ಅವುಗಳನ್ನು ಪೂರೈಸುವುದಕ್ಕೂ ಕ್ರಮ ತೆಗೆದುಕೊಂಡಿದೆ ಎಂದು ಮೋದಿ ವಿವರಿಸಿದರು.

ಚೀನಾ ಅತಿಕ್ರಮಣಕ್ಕೆ ವಿರೋಧ: ಅಂತಾರಾಷ್ಟ್ರೀಯ ವಾಣಿಜ್ಯ-ವಹಿವಾಟಿಗೆ ಸಾಗರ ಮಾರ್ಗಗಳೇ ಜೀವನಾಡಿಗಳು. ಅವುಗಳು ನಿರಂಕುಶ ಮತ್ತು ಮುಕ್ತವಾಗಿರಬೇಕು. ಅವುಗಳನ್ನು ಭೌಗೋಳಿಕ ವಿಸ್ತರಣಾವಾದಕ್ಕೆ ಬಳಸಿಕೊಳ್ಳಬಾರದು. ಸಾಗರ ಸಂಪನ್ಮೂಲಗಳನ್ನು ಎಲ್ಲ ದೇಶಗಳು ಎಚ್ಚರಿಕೆಯಿಂದ ಬಳಸಬೇಕು. ಅವುಗಳನ್ನು ಶೋಷಿಸಬಾರದು. ವಿಸ್ತರಣಾವಾದದಿಂದ ಸಾಗರಗಳನ್ನು ಜಗತ್ತು ರಕ್ಷಿಸಬೇಕು ಮತ್ತು ವಾಣಿಜ್ಯ ವಹಿವಾಟಿಗೆ ಮುಕ್ತವಾಗಿ ಇರಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.

 
 
 
 
 
 
 
 
 

Leave a Reply