ಕಥೆ ಹೇಳುವ ಪುಟ್ಟ ಕೀ ಪ್ಯಾಡ್ ಮೊಬೈಲ್!

ಈ ಫೋಟೋದಲ್ಲಿ ಕಾಣುತ್ತಿರುವ ಸಜ್ಜನನ ಹೆಸರು ಪ್ರತಾಪ್ ಆಚಾರ್ಯ, ಕಾಸರಗೋಡಿನವರು. ಪರಿಚಿತರು ಕಂಡರೆ ಸಾಕು ಓಡಿ ಹೋಗಿ ಮಾತಾಡಿಸದಿದ್ದರೆ ಇವರಿಗೆ ಸಮಾಧಾನವಿಲ್ಲ! ಅಂಥಾ ಸಹೃದಯಿ. ಇವರದ್ದೊಂದು ವಿಲಕ್ಷಣ ವ್ಯಕ್ತಿತ್ವವಿದೆ. ಊರಲ್ಲಿ ನಡೆವ ಯಾವುದೇ ಸಮಾರಂಭವಿರಲಿ, ಆಮಂತ್ರಣ ಇರಲಿ ಇಲ್ಲದಿರಲಿ ಇವರು ತಪ್ಪದೇ ಹಾಜರಾಗುತ್ತಾರೆ. ಹಾಜರಾಗುವುದು ಮಾತ್ರವಲ್ಲ ತಮ್ಮ ಓಬೀರಾಯನ ಕಾಲದ ಪುಟ್ಟ ಕೀ ಪ್ಯಾಡ್ ಮೊಬೈಲಿನಲ್ಲಿ ಸಮಾರಂಭದ ಎಲ್ಲಾ ಕಾರ್ಯಕ್ರಮಗಳನ್ನು ಸೆರೆ ಹಿಡಿಯುತ್ತಾರೆ. ಸ್ಮಾರ್ಟ್ ಫೋನ್’ಗಳ ಈ ಕಾಲದಲ್ಲಿ ಇವರು ಹೀಗೆ ಫೋಟೋ ಹಿಡಿಯುವ ಸಂಭ್ರಮವನ್ನು ಕಂಡು ಕುಚೇಷ್ಟೆ ಮಾಡುವವರೂ ಇದ್ದಾರೆ. ತಳ್ಳಿ ಆ ಕಡೆ ಸಾಗಿಸುವವರೂ ಇದ್ದಾರೆ. ಬೈದು ಆಚೆಗಟ್ಟುವವರೂ ಇದ್ದಾರೆ! ಆದರೆ ಈ ಯಾವ ಅವಮಾನಗಳಿಗೂ ಕ್ಯಾರೇ ಅನ್ನದ ಪ್ರತಾಪ್ ಆಚಾರ್ಯರು ಎಲ್ಲೋ ನುಗ್ಗಿ ಕ್ಲಿಕ್ಕಿಸಿಕೊಳ್ಳುತ್ತಿರುತ್ತಾರೆ. ಒಮ್ಮೆ ಯಾರೋ ನೂಕಿ ಬೀಳಿಸಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ಎದ್ದು ಹೋಗಿ ಸಾಂತ್ವನ ಹೇಳಿದ್ದೂ ಇದೆ. ಇಷ್ಟಿದ್ದೂ ಈ ವ್ಯಕ್ತಿ ಯಾಕೆ ಆಹ್ವಾನವಿಲ್ಲದ ಸಮಾರಂಭಗಳಿಗೆ ಹೋಗಿ ತಮ್ಮ ಪುಟ್ಟ ಮೊಬೈಲಿನಲ್ಲಿ ಕಾರ್ಯಕ್ರಮಗಳ ಫೋಟೋ ಕ್ಲಿಕ್ಕಿಸುತ್ತಾರೆಂದರೆ…ಇದಕ್ಕೊಂದು ಹಿನ್ನೆಲೆಯಿದೆ :
ಹೃದಯ ಹಿಂಡುವ ಈ ಹಿನ್ನೆಲೆಯ ಕಥೆಯನ್ನು ಪ್ರತಾಪ್ ಆಚಾರ್ಯರಿಂದ ಹೊರ ತೆಗೆದದ್ದು ಬೇರೆ ಯಾರೂ ಅಲ್ಲ, ಕೊಯಂಬತ್ತೂರಿನಲ್ಲಿ ಸೆಟ್ಲ್ ಆಗಿರುವ ಕಾಸರಗೋಡಿನ ಛಾಯಾಗ್ರಾಹಕ ಕೃತಿಕ್ ಆಚಾರ್ಯ. ಅಲ್ಲಿ ‘ಥರ್ಡ್ ಐ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿರುವ ಕೃತಿಕ್ ಒಮ್ಮೆ ಕಾಸರಗೋಡಿಗೆ ಬಂದು ಮದುವೆಯೊಂದರ ಫೋಟೋ ಸೆಷನ್’ನಲ್ಲಿ ಭಾಗಿಯಾಗಿದ್ದಾಗ ಈ ಪ್ರತಾಪ್ ಆಚಾರ್ಯರು ಕೂಡಾ ಫೋಟೋ ಕ್ಲಿಕ್ಕಿಸುವುದರಲ್ಲಿ ಬಿಜಿಯಾಗಿದ್ದರು, ಅದೂ ಅದೇ ಲಾಟರಿ ಕೀ ಪ್ಯಾಡ್ ಮೊಬೈಲಿನಲ್ಲಿ! ಕುತೂಹಲದಿಂದ ವಿಚಾರಿಸಿದಾಗ ಪ್ರತಾಪ್ ಆಚಾರ್ಯರು ಹೇಳಿದ ಕರುಳು ಹಿಂಡುವ ಕಥೆಯನ್ನು ಕೇಳಿ ಕೃತಿಕ್ ದಂಗು ಬಡಿದು ಹೋದರು…
ಆ ಟೂ ಲೈನ್ ಸ್ಟೋರಿ ಹೀಗಿದೆ : ಕಡು ಬಡವರಾಗಿರುವ ಪ್ರತಾಪ್ ಆಚಾರ್ಯರ ಪತ್ನಿ ಅನಾರೋಗ್ಯ ಪೀಡಿತೆಯಾಗಿದ್ದು ಯಾವುದೇ ಕಾರ್ಯಕ್ರಮಗಳ ಸಂಭ್ರಮದಲ್ಲಿ ಭಾಗಿಯಾಗಲಾರದ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ತಾನು ಭಾಗವಹಿಸಿದ ಎಲ್ಲಾ ಕಾರ್ಯಕ್ರಮಗಳ ಫೋಟೋಗಳನ್ನು ತನ್ನ ಅಸಹಾಯಕ ಪತ್ನಿಗೆ ತೋರಿಸುವುದಕ್ಕಾಗಿ ತನ್ನದೇ ಆದ ಕೀ ಪ್ಯಾಡ್ ಮೊಬೈಲಿನಲ್ಲಿ ಕ್ಲಿಕ್ಕಿಸುತ್ತಾರೆ!!!
ಈ ಬಗ್ಗೆ ‘ಥರ್ಡ್ ಐ’ ಕೃತಿಕ್’ರನ್ನು ಸಂಪರ್ಕಿಸಿ ವಿಚಾರಿಸಿದಾಗ ಅವರು ಹೇಳಿದ್ದಿಷ್ಟು : ‘ಹೌದು, ಕೆಲವರ ವ್ಯಕ್ತಿತ್ವ , ವರ್ತನೆಗಳು ನಮಗೆ ವಿಲಕ್ಷಣ, ವ್ಯಂಗ್ಯ ಅನಿಸಬಹುದಾದರೂ ಅವರ ಈ ರೀತಿಯ ವರ್ತನೆಯ ಹಿಂದಿರುವ ಕಾರಣಗಳು ಹೃದಯ ಕಲಕುವಂತಿರುತ್ತದೆ…ಎಷ್ಟು ಬೆಲೆಬಾಳುವ ಕ್ಯಾಮರಾ ಎಂಬುದು ಮುಖ್ಯವಲ್ಲ, ಆ ಕ್ಯಾಮರಾ ಲೆನ್ಸ್‌ನ ಹಿಂದೆ ಯಾರು ಇದ್ದಾರೆ ಎಂಬುದು ಮುಖ್ಯ ಎಂದು ಒಬ್ಬ ಛಾಯಾಗ್ರಾಹಕನಾಗಿ ನನಗೆ ಅಂದು ಅರ್ಥವಾಯಿತು.ಅವರು ತೆಗೆದ ಆ ಚಿತ್ರಗಳು ನಾನು ತೆಗೆದ ಪೋಟೋಗಳ ಮುಂದೆ ಬೆಲೆ ಕಟ್ಟಲಾರದ ಪೋಟೋಗಳಾಗಿತ್ತು. ನಾನು‌ ತೆಗೆದ ಪೋಟೋಗಳಿಗಿಂತ ಅವರ ಆ ಮೊಬೈಲ್‌ನಲ್ಲಿ ಸೆರೆಯಾದ ಪುಟ್ಟ ಪುಟ್ಟ ಪೋಟೋಗಳು ಹೆಚ್ಚು ಸುಂದರವಾಗಿತ್ತು ಮತ್ತು ಬಹಳ ಅರ್ಥಪೂರ್ಣವಾಗಿತ್ತು…ಜೊತೆಗೆ, ನನ್ನ ಬಳಿ‌ ಇದ್ದ ಛಾಯಾಗ್ರಹಣದ ತಂತ್ರಜ್ಞಾನಗಳು, ಉಪಕರಣಗಳು ಮತ್ತು ಕೌಶಲ್ಯಗಳು ಆ ವ್ಯಕ್ತಿ ತೆಗೆದ ಪೋಟೋಗಳಲ್ಲಿರುವ ಭಾವನೆಗಳಿಗೆ ಸರಿಸಮಾನವಾಗಲೇ ಇಲ್ಲ…’ – ಹೀಗೆಂದು ಕೃತಿಕ್ ಹೇಳಿದಾಗ ಮರು ಮಾತಾಡಲು ನನ್ನಲ್ಲಿ ಪದಗಳಿರಲಿಲ್ಲ…ಜಸ್ಟ್ ‘ಧನ್ಯ ಕಾರ್ತಿಕ್’ ಅಂತ ಹೇಳಿ ಮೌನವಾದೆ!

 
 
 
 
 
 
 
 
 
 
 

Leave a Reply