ವರುಣನ ಆರ್ಭಟ: ಮಂಗಳೂರು ಏರ್​ಪೋರ್ಟ್​ ರನ್​ವೇ ಸಮೀಪದ ರಸ್ತೆ ಕುಸಿತ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ತಹಬಧಿಗೆ ಬರುವಂತೆ ಕಾಣುತ್ತಿಲ್ಲ. ಜಿಲ್ಲೆಯಲ್ಲಿ ರೆಡ್​ ಅಲರ್ಟ್​ ಘೋಷಣೆ ಮಾಡಲಾಗಿದ್ದು ಭಾರೀ ಮಳೆಯಿಂದಾಗಿ ಉಂಟಾಗಬಲ್ಲ ಯಾವುದೇ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದೆ. ಮುಂಜಾಗ್ರತಾ ಕ್ರಮವಾಗಿ ಇಂದೂ ಸಹ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ದಕ್ಷಿಣ ಕನ್ನಡ ಜಿಲ್ಲಾಡಳಿತ ಆದೇಶವನ್ನು ಹೊರಡಿಸಿದೆ. ಈ ನಡುವೆ ಭಾರಿ ಮಳೆಯಿಂದಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್​ ವೇ ಸಮೀಪದಲ್ಲಿಯೇ ರಸ್ತೆ ಕುಸಿತಗೊಂಡಿದೆ.

ರನ್​ ವೇ ಕುಸಿತದಿಂದಾಗಿ ವಿಮಾನ ನಿಲ್ದಾಣದ ಸುತ್ತ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಈಗಾಗಲೇ ಅದ್ಯಪಾಡಿಯಿಂದ ಕೈ ಕಂಬಕ್ಕೆ ತೆರಳುವ ಮಾರ್ಗವನ್ನು ಬ್ಲಾಕ್​ ಮಾಡಲಾಗಿದೆ. ಭಾರೀ ಮಳೆಯಿಂದಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈಗಾಗಲೇ ಜಿಲ್ಲಾಡಳಿತ ಸ್ಥಳಕ್ಕೆ ಧಾವಿಸಿದೆ. ರನ್​ ವೇ ಸಮೀಪದಲ್ಲಿ ಉಂಟಾಗಿರುವ ರಸ್ತೆ ಕುಸಿತವನ್ನು ಸರಿಪಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯೇ ಇರುವ ಅದ್ಯಪಾಡಿ ಪದವು ಎಂಬಲ್ಲಿ ಗುಡ್ಡ ಕುಸಿತಗೊಂಡಿದೆ. ರಸ್ತೆಗೆ ಹೊಂದಿಕೊಂಡೇ ಇರುವ ಗುಡ್ಡ ಇದಾಗಿದ್ದು ಇದೀಗ ಕುಸಿತವಾಗಿದೆ. ಏರ್​ಪೋರ್ಟ್​ ರನ್​ ವೇನಿಂದ ಭಾರೀ ಪ್ರಮಾಣದಲ್ಲಿ ನೀರನ್ನು ಹೊರಗೆ ಹರಿ ಬಿಡಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಅವಘಡ ಸಂಭವಿಸಿದೆ ಎಂಬುದು ಸ್ಥಳೀಯರ ಆರೋಪವಾಗಿದೆ. ಅಲ್ಲದೇ ಇಲ್ಲಿರುವ ಕಲ್ಲು ಗಣಿಗಾರಿಕೆ ಸ್ಥಳದಲ್ಲಿಯೂ ಭಾರೀ ಮಳೆಯಿಂದಾಗಿ ನೀರು ತುಂಬಿದ್ದು ಈ ಕಾರಣದಿಂದಲೂ ಗುಡ್ಡ ಕುಸಿತವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ, ಏರ್​ಪೋರ್ಟ್​ನಲ್ಲಿ ಕಾರ್ಯಾಚರಣೆ ಸಾಮಾನ್ಯ ರೀತಿಯಲ್ಲಿಯೇ ನಡೆಯುತ್ತಿದೆ. ರನ್​ ವೇಗೆ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ . ಎರಡು ದಿನಗಳ ಹಿಂದೆ ಸತತ ನೀರಿನ ಹರಿವಿನಿಂದ ಮೋರಿಯ ಬುಡ ಕೊಚ್ಚಿ ಹೋಗಿತ್ತು. ಹೀಗಾಗಿ ರಸ್ತೆಯು ಕುಸಿತಗೊಂಡಿದೆ. ಸ್ಥಳೀಯ ಅಧಿಕಾರಿಗಳು ರಸ್ತೆ ದುರಸ್ಥಿ ಕಾರ್ಯವನ್ನು ಕೈಗೊಂಡಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದೆ .

ಮಂಗಳೂರಿನಲ್ಲಿ ವರುಣನ ಆರ್ಭಟದಿಂದಾಗಿ ಪರಿಸ್ಥಿತಿ ಕೈ ಮೀರುತ್ತಿದ್ದು ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಜಿಲ್ಲಾಡಳಿತ ಸಕಲ ರೀತಿಯಲ್ಲಿ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಆದರೂ ಎಚ್ಚರಿಕೆಯಿಂದ ಇರುವಂತೆ ಜಿಲ್ಲೆಯ ಜನತೆಗೆ ಸೂಚನೆ ನೀಡಲಾಗಿದೆ.

 
 
 
 
 
 
 
 
 
 
 

Leave a Reply