ಉಡುಪಿಯಲ್ಲಿ ಮಳೆಯ ಅಬ್ಬರಕ್ಕೆ ಅಪಾಯದಲ್ಲಿದೆ ಬಹುಮಹಡಿ ಕಟ್ಟಡ

ಉಡುಪಿ: ಮಳೆಯ ಅಬ್ಬರಕ್ಕೆ ಉಡುಪಿಯ ಹಲವು ಪ್ರದೇಶ ಸಂಕಷ್ಟದಲ್ಲಿ ನಲುಗುತ್ತಿದ್ದು, ಇದೀಗ ಅತಿಯಾದ ಮಳೆಯ ಕಾರಣ ಬಹುಮಹಡಿ ಕಟ್ಟಡವೊಂದು ಅಪಾಯಕ್ಕೆ ಸಿಲುಕಿದೆ. ಮಣಿಪಾಲ ಸಿಂಡಿಕೇಟ್ ವೃತ್ತದ ಹತ್ತಿರವಿರುವ ಕುಂಡೇಲುಕಾಡಿನ ಗುಡ್ಡ ಜರಿದಿದ್ದು, ವಸತಿ ಸಮುಚ್ಚಯದ ಆವರಣಗೋಡೆಯೂ ಕುಸಿದಿದೆ‌. ಮಣಿಪಾಲದಲ್ಲಿನ ಪ್ರೀಮಿಯರ್ ಎನ್ಕ್ಲೇವ್ ವಸತಿ ಸಮುಚ್ಚಯದ ಕಟ್ಟಡವು 8 ಮಹಡಿಗಳನ್ನು ಹೊಂದಿದೆ.
ಇಲ್ಲಿನ ಎರಡು ನೆಲ ಮಹಡಿಯನ್ನು ಪಾರ್ಕಿಂಗ್ ಗಾಗಿ ಉಪಯೋಗಿಸಲಾಗುತ್ತಿದ್ದು, ತಳ ಮಹಡಿಯನ್ನು ವಾಣಿಜ್ಯ ವಹಿವಾಟಿಗಾಗಿ ಬಳಸಲಾಗುತ್ತಿದೆ.

15 ವರ್ಷ ಹಿಂದೆ ನಿರ್ಮಿಸಲಾಗಿರುವ ಈ ಕಟ್ಟಡದಲ್ಲಿ ಒಟ್ಟು 32 ಮನೆಗಳಿದ್ದು, ಸದ್ಯ 25 ಮಂದಿಯ ವಾಸ್ತವ್ಯ ಹೂಡಿದ್ದಾರೆ. ಇಲ್ಲಿನ ಗುಡ್ಡ ನಿನ್ನೆ ಸಂಜೆಯೇ ಅಲ್ಪ ಪ್ರಮಾಣದಲ್ಲಿ ಜರಿದಿದ್ದು ,ಇಂದು ಸಂಜೆಯ ವೇಳೆಗೆ ಮತ್ತೆ ಗುಡ್ಡ ಜರಿದಿದೆ.ಸಂಜೆ 4 ಗಂಟೆಯ ಹೊತ್ತಿಗೆ ಈ ಕಟ್ಟಡದ ಕೆಳಗಿನ ಗುಡ್ಡ ಮೋರಿ ಸಹಿತ ಜರಿದು ಬಿದ್ದಿದೆ. ಆ ಕೂಡಲೇ ಕಟ್ಟಡ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯ ವಾಹನ ಸಂಚಾರವನ್ನು ನಿರ್ಬಂಧಿಸಿ, ಸ್ಥಳೀಯಾಡಳಿತ ಹಾಗೂ‌ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಮುಂಜಾಗೃತಾ ಕ್ರಮವಾಗಿ ಸೂಚನೆ ನೀಡಿದ ನಗರಸಭೆಯ ಪೌರಾಯುಕ್ತ ಆನಂದ ಕಲ್ಲೋಳಿಕರ್ ಸದ್ಯ ಇಲ್ಲಿನ ವಸತಿ ಸಮುಚ್ಛಯದ ನಿವಾಸಿಗಳನ್ನು ಸ್ಥಳಾಂತರಗೊಳಿಸುವಂತೆ ಹಾಗೂ ವಾಣಿಜ್ಯ ಚಟುವಟಿಕೆಯನ್ನು ನಿಲ್ಲಿಸಲು ಹೇಳಿದ್ದಾರೆ.

 
 
 
 
 
 
 
 
 
 
 

Leave a Reply