ಮಹಾಭಾರತಕ್ಕೂ ಚೌತಿಗೂ ವಿಶೇಷ ನಂಟು: ಅದಮಾರು ಶ್ರೀ

ಉಡುಪಿ: ವ್ಯಾಸರ ಮಹಾಭಾರತವು ಅನೇಕ ಮೌಲಿಕ ವಿಚಾರಗಳನ್ನೊಳಗೊಂಡಿದೆ. ಶ್ರುತಿ, ಪುರಾಣ ಮೊದಲಾದವುಗಳಿಗಿಂತಲೂ ಅಧಿಕ ತೂಕ ಮಹಾಭಾರತಕ್ಕಿದೆ. ಮಹಾಭಾರತವನ್ನು ಬರೆಯುವಾಗ ಗಣಪತಿ ಹಾಗೂ ವ್ಯಾಸರ ನಡುವೆ ಒಪ್ಪಂದ ಏರ್ಪಟ್ಟಿತ್ತು. ವ್ಯಾಸರು ಕಥೆಯನ್ನು ಹೇಳುತ್ತಾ ಸಾಗುವಾಗ ಗಣಪತಿ ಅದಕ್ಕೆ ಲಿಪಿ ರೂಪ ನೀಡಿದನು. ಗಣಪತಿಯು ಮಹಾಭಾರತದ ಲಿಪಿಕಾರನಾದುದರಿಂದ ಚೌತಿಯ ಸಂದರ್ಭದಲ್ಲಿ ಭಾರತ ಕಥೆಯ ಶ್ರವಣ ಪುಣ್ಯದಾಯಕ ಎಂದು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದರು.

ಅವರು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗವು ಆಂತರಿಕ ಗುಣಮಟ್ಟ ಖಾತರಿ ಘಟಕದೊಂದಿಗೆ ಚೌತಿಯ ಸಂದರ್ಭದಲ್ಲಿ ಆಯೋಜಿಸಿದ್ದ ಕುಮಾರವ್ಯಾಸ ಭಾರತದ ವಾಚನ ಹಾಗೂ ಪ್ರವಚನದ ನೇರಪ್ರಸಾರ ಕರ‍್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚಿಸಿದರು. ವ್ಯಾಸರಿಂದ ಸಂಸ್ಕೃತದಲ್ಲಿ ರಚಿತವಾದ ಮಹಾಭಾರತವನ್ನು ಸಾಮಾನ್ಯ ಜನರು ಅರಗಿಸಿಕೊಳ್ಳುವುದು ಕಷ್ಟವಾಗಿತ್ತು. ಹಾಗಾಗಿ ಕನ್ನಡ ಮೊದಲಾದ ಭಾಷೆಗಳಲ್ಲೂ ವ್ಯಾಸ ಭಾರತವು ಅನುವಾದಗೊಂಡಿತು. ಕನ್ನಡದಲ್ಲಿ ಕುಮಾರವ್ಯಾಸನು ಭಾಮಿನಿ ಷಟ್ಪದಿಯಲ್ಲಿ ಸರಳವಾಗಿ ಕನ್ನಡಿಗರಿಗೆ ಭಾರತ ಕಥೆಯನ್ನು ನೀಡಿದನು.

ಈ ಕಾವ್ಯವನ್ನು ಶ್ರೀ ಚಂದ್ರಶೇಖರ ಕೆದ್ಲಾಯರಂಥ ಗಮಕಿಗಳು ಹಲವು ವರ್ಷಗಳಿಂದ ಗಮಕದ ಮೂಲಕ ಕನ್ನಡದ ಕಾವ್ಯಾಸಕ್ತರಿಗೆ ತಲುಪಿಸುತ್ತಿದ್ದಾರೆ ಎಂದರು. ಕುಮಾರವ್ಯಾಸ ಭಾರತದ ಕರ್ಣಭೇದನ ಭಾಗವನ್ನು ಇದೇ ಸಂದರ್ಭದಲ್ಲಿ ಚಂದ್ರಶೇಖರ ಕೆದ್ಲಾಯರು ವಾಚಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ.ಎ., ಐಕ್ಯುಎಸಿ ಸಂಯೋಜಕ ಡಾ. ಪ್ರಕಾಶ್ ರಾವ್ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಸಿದ್ದಾಪುರ ಸ್ವಾಗತಿಸಿದರು.

Leave a Reply