ಬಂಗಾರ ಸಾಲದ ಮೇಲೆ ಭಾರಿ ಕಡಿತ : ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಿಂದ ನೂತನ ಯೋಜನೆ

ಉಡುಪಿ : ಕೊರೋನಾದಿಂದ ಸೃಷ್ಟಿಯಾಗಿರುವ ಈ ಸಂಕ್ರಮಣ ಸ್ಥಿತಿಯಲ್ಲಿ ಜನಸಾಮಾನ್ಯರಿಗೆ ಅದರಲ್ಲೂ ರೈತರು ಮತ್ತು ವ್ಯಾಪಾರಸ್ಥರಿಗಿರುವ ಆರ್ಥಿಕ ಅಗತ್ಯಗಳನ್ನು ಗಮನಿಸಿ, ಕೆನರಾ ಬ್ಯಾಂಕ್ ಪ್ರವರ್ತಿತ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ 7.25%ರಷ್ಟು ಕಡಿಮೆ ಬಡ್ಡಿ ದರದಲ್ಲಿ ವಿಶೇಷ ಚಿನ್ನದ ಸಾಲ ಯೋಜನೆಯನ್ನು ರೂಪಿಸಿದೆ. “ವಿಕಾಸ್ ಲಘು ಸುವರ್ಣ” ಎಂಬ ಹೆಸರಿನಲ್ಲಿ ಉಡುಪಿಯಲ್ಲಿ ಶುಕ್ರವಾರದಂದು ಬಿಡುಗಡೆಗೊಳಿಸಿದೆ.ನೂತನ ಬಂಗಾರ ಸಾಲ ಯೋಜನೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಪಿ ಗೋಪಿ ಕೃಷ್ಣ ಸದ್ಯದ ಸ್ಥಿತಿಯನ್ನು ಗಮನದಲ್ಲಿರಿಸಿ ಅಗತ್ಯವಿರುವ ಗ್ರಾಹಕರಿಗೆ ಅತಿ ಕಡಿಮೆ ಬಡ್ಡಿದರದಲ್ಲಿ ಸುಲಭವಾಗಿ ಸಾಲವನ್ನು ಒದಗಿಸುವ ಉದ್ದೇಶದಿಂದ ಈ ಸಾಲ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದಿದ್ದಾರೆ. ವೈರಸ್ ಪಿಡುಗಿನಿಂದಾಗಿ ದೇಶ ಸಾಮಾಜಿಕ ಮತ್ತು ಆರ್ಥಿಕತೆ ಕ್ರಮವು ಬದಲಾವಣೆಗೊಳಗಾಗುತ್ತಿದೆ. ಪ್ರಸ್ತುತ ಸವಾಲಿನ ಈ ಕಾಲದಲ್ಲಿ ಈ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಜೀವನೋಪಾಯವನ್ನು ಬೆಂಬಲಿಸಲು ಬ್ಯಾಂಕಿನ ಇತ್ತೀಚಿನ ವ್ಯವಹಾರ ಕ್ರಮಗಳು ಪೂರಕವಾಗಿವೆ ಎಂದು ಅವರು ಹೇಳಿದರು.

ತುರ್ತು ಸಂದರ್ಭದಲ್ಲಿ ಚಿನ್ನದ ಸಾಲಗಳನ್ನು ಅತೀ ಶೀಘ್ರದಲ್ಲಿ ಪಡೆಯಬಹುದು ಮತ್ತು ಸುಲಭವಾಗಿ ಸಿಗುವುದರಿಂದಲೂ, ಇದು ಗ್ರಾಹಕರಲ್ಲಿ ಜನಪ್ರಿಯ ಸಾಲ ಯೋಜನೆಯಾಗಿದೆ. ಇನ್ನೂ ಈ ಹೊಸ ಚಿನ್ನ ಸಾಲ ಯೋಜನೆಯಡಿ ಬ್ಯಾಂಕು ಮಾರುಕಟ್ಟೆ ಮೌಲ್ಯದ 80% ಅಥವಾ ಪ್ರತಿ ಗ್ರಾಂಗೆ ಗರಿಷ್ಠ 3200 ರೂ. ನಿಗದಿಪಡಿಸಿದೆ. 15 ಲಕ್ಷ ರೂ.ಗಳ ವರೆಗೆ ಗರಿಷ್ಠ ಸಾಲ ನೀಡಲಾಗುವುದು ಮತ್ತು ಗರಿಷ್ಠ 90ದಿನಗಳ ಅವಧಿಯಲ್ಲಿ ಸಾಲವನ್ನು ಮರುಪಾವತಿಸ ಬೇಕಾಗುವುದು.

ಪ್ರಸ್ತುತ ಬ್ಯಾಂಕು ಚಿನ್ನದ ಸಾಲದ ಅಡಿಯಲ್ಲಿ 410 ಕೋಟಿ ರೂ. ಹೊಂದಿದ್ದು ಈ ಯೋಜನೆ 31/12/2020ರಂದು ಮುಕ್ತಾಯ ಗೊಳ್ಳುವುದರಿಂದ ಡಿಸೆಂಬರ್ 31ರ ಮೊದಲು ಕನಿಷ್ಠ 100ಕೋಟಿ ಸಾಲವನ್ನು ವಿತರಿಸುವ ಗುರಿ ಹೊಂದಿದ್ದೇವೆ ಎಂದು ಗೋಪಿ ಕೃಷ್ಣ ಹೇಳಿದರು. ಬ್ಯಾಂಕಿನ ಮಹಾಪ್ರಬಂಧಕರಾದ ಚಂದ್ರಶೇಖರ್ ಡಿ ಮೊರೊ, ಬಿ ಸಿ ರವಿಚಂದ್ರ, ಪಿ.ನಾಗೇಶ್ವರ ರಾವ್, ಮುಖ್ಯ ವ್ಯವಸ್ಥಾಪಕ ವಿ ವಿ ಯಾಜಿ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply