ಆರೋಗ್ಯ ಶಿಬಿರದ ಮೂಲಕ ‘ಸೇವಾ ಪಾಕ್ಷಿಕ’ ಅಭಿಯಾನದ ಸೇವಾ ಕಾರ್ಯಗಳು ಕಟ್ಟಕಡೆಯ ವ್ಯಕ್ತಿಗಳಿಗೆ ತಲುಪುವಂತಾಗಿದೆ: ಕುಯಿಲಾಡಿ ಸುರೇಶ್ ನಾಯಕ್

ಬಿಜೆಪಿ ಸೆ.17ರಿಂದ ಅ.2ರ ತನಕ ಜಿಲ್ಲೆಯಾದ್ಯಂತ ಆಚರಿಸುತ್ತಿರುವ ಸೇವಾ ಪಾಕ್ಷಿಕ ಅಭಿಯಾನದ ಸೇವಾ ಕಾರ್ಯಗಳು ವೈಶಿಷ್ಟ್ಯಪೂರ್ಣ ಆರೋಗ್ಯ ತಪಾಸಣಾ ಶಿಬಿರದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ತಲುಪುವಂತಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಸೆ.25 ರವಿವಾರ ಬಿಜೆಪಿ ಉಡುಪಿ ಜಿಲ್ಲೆ, ಜಿಲ್ಲಾ ಮಾಧ್ಯಮ ಪ್ರಕೋಷ್ಠ ಮತ್ತು ಜಿಲ್ಲಾ ವೈದ್ಯಕೀಯ ‌ಪ್ರಕೋಷ್ಠದ ಜಂಟಿ ಆಶ್ರಯದಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ನುರಿತ ವೈದ್ಯರ ಸಹಯೋಗದೊಂದಿಗೆ ‘ಸೇವಾ‌ ಪಾಕ್ಷಿಕ’ ಅಭಿಯಾನ ಮತ್ತು ‘ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆ’ಯ ಪ್ರಯುಕ್ತ ಜಿಲ್ಲೆಯ ಪತ್ರಕರ್ತರು, ಪತ್ರಿಕಾ ವಿತರಕರು, ಕೇಬಲ್ ಅಪರೇಟರ್ ಸಿಬ್ಬಂದಿಗಳು ಮತ್ತು ಸಾರ್ವಜನಿಕರಿಗಾಗಿ ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಆಯೋಜಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, ಜನತೆ ಮೋದಿಯವರನ್ನು ಸ್ವೀಕರಿಸಿದ ಪರಿ ಹೆಮ್ಮೆ ಎನಿಸುತ್ತದೆ. ಈ ನಿಟ್ಟಿನಲ್ಲಿ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಪಕ್ಷಕ್ಕೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಕಾರ್ಯಗಳಾಗಬೇಕಿದೆ.

‘ಸೇವಾ ಪಾಕ್ಷಿಕ’ ಅಭಿಯಾನದಡಿ ವೈದ್ಯಕೀಯ ಸೇವೆ, ರಕ್ತದಾನ, ಕೋವಿಡ್ ಲಸಿಕೆ ವಿತರಣೆ, ಸ್ವಚ್ಛತೆ, ಸಸಿ ನೆಡುವ ಅಭಿಯಾನ ಮುಂತಾದ ನೂರಾರು ಸೇವಾ ಕಾರ್ಯಗಳು ಜಿಲ್ಲೆಯಾದ್ಯಂತ ವೇಗ ಪಡೆದಿದೆ. ಈ ವಿನೂತನ ಮಾದರಿಯ ಆರೋಗ್ಯ ತಪಾಸಣಾ ಶಿಬಿರವು ಪ್ರಚಾರಕ್ಕೆ ಹೊರತಾಗಿ ಆರೋಗ್ಯದ ನೈಜ ಕಾಳಜಿ ಇರುವ ಜನತೆಗೆ ವೈವಿಧ್ಯಮಯ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಸಮಾರಂಭದ ಮುಖ್ಯ ಅತಿಥಿಗಳಾದ ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಕೆ.ಉದಯ ಕುಮಾರ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಯವರು ಆರೋಗ್ಯ ಸಂರಕ್ಷಣೆಯ ಔಚಿತ್ಯವನ್ನು ವಿಶ್ಲೇಷಿಸಿ ಮಾತನಾಡಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ! ರಾಮಚಂದ್ರ ಕಾಮತ್ ಮಾತನಾಡಿ ಆರೋಗ್ಯ, ಆಯುಷ್ಯ, ಯಶಸ್ಸು ಮತ್ತು ನೆಮ್ಮದಿ ಒಂದಕ್ಕೊಂದು ಪೂರಕವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸ್ಬಯಂ ಆರೋಗ್ಯದ ಕಾಳಜಿಯೊಂದಿಗೆ ಸಕಾಲಿಕ ಆರೋಗ್ಯ ತಪಾಸಣೆಯ ಮೂಲಕ ತಮ್ಮ ಆರೋಗ್ಯ ಸಂರಕ್ಷಣೆ ಹೆಚ್ಚಿನ ಮಹತ್ವ ನೀಡುವುದು ಇಂದಿನ ಅಗತ್ಯತೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಡಾ! ಧರ್ಮ ಯು. ಶೆಟ್ಟಿ, ಶಿವಾನಿ ಡಯಾಗ್ನೊಸ್ಟಿಕ್ಸ್ ಮುಖ್ಯಸ್ಥ ಶಿವಾನಂದ ನಾಯಕ್, ಜಿಲ್ಲೆಯ ಹಿರಿಯ ಪತ್ರಿಕಾ ವಿತರಕ ಬಾಲಕೃಷ್ಣ ಶೆಟ್ಟಿ ಕರ್ಜೆ, ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಹ ಸಂಚಾಲಕ ಡಾ! ವಿದ್ಯಾಧರ ಶೆಟ್ಟಿ, ಜಿಲ್ಲಾ‍ ಸಹ ವಕ್ತಾರ ಪ್ರತಾಪ್ ಶೆಟ್ಟಿ ಚೇರ್ಕಾಡಿ ಹಾಗೂ ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ ಪ್ರಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆೆ ಸ್ವಾಗತಿಸಿದರು. ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

12 ವಿಭಾಗದಲ್ಲಿ ವೈದ್ಯಕೀಯ ತಪಾಸಣೆ ಶಿಬಿರ ಆಯೋಜಿಸಲಾಗಿದ್ದು, 250ಕ್ಕೂ ಅಧಿಕ ಮಂದಿ ಶಿಬಿರದ ಸದುಪಯೋಗ ಪಡೆದುಕೊಂಡರು. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪಾಲ ಇದರ ವತಿಯಿಂದ 100ಕ್ಕೂ ಅಧಿಕ ಮಂದಿಗೆ ಕೋವಿಡ್ ಬೂಸ್ಟರ್‌ ಡೋಸ್ ವಿತರಿಸಲಾಯಿತು. ಶ್ರೀಕಾಂತ್ ನಾಯಕ್ ನೇತೃತ್ವದ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಅಲೆವೂರು ಮತ್ತು ಗ್ರಾಮ ಒನ್ ಸೇವಾ ಕೇಂದ್ರ ಕಟಪಾಡಿ ವತಿಯಿಂದ 200ಕ್ಕೂ ಮಿಕ್ಕಿ ನಾಗರಿಕರಿಗೆ ಆಯುಷ್ಮಾನ್ ಭಾರತ್ ಕಾರ್ಡ್ – ಅಭಾ ಕಾರ್ಡ್ ನೊಂದಾವಣೆ ಪ್ರಕ್ರಿಯೆ ನಡೆಯಿತು. ಜಿಲ್ಲೆಯ ಪತ್ರಕರ್ತರು, ಪತ್ರಿಕಾ ವಿತರಕರು, ಕೇಬಲ್ ಅಪರೇಟರ್ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಂಡರು.

 
 
 
 
 
 
 
 
 
 
 

Leave a Reply