ಮದುವಣಗಿತ್ತಿಯಂತೆ ಸಂಭ್ರಮಿಸುತ್ತಿದೆ ತುಳುನಾಡಿನ ಕೃಷಿಭೂಮಿ~ಹರೀಶ ರಾವ್

ತುಳುನಾಡು, ತುಳುವರ ಚರಿತ್ರೆಯನ್ನು ನೋಡಿದಾಗ ಕೃಷಿಯನ್ನೇ ಪ್ರಧಾನ ಕಸುಬನ್ನಾಗಿ ನಂಬಿಕೊಂಡು ಬದುಕಿದವರು. ಹಿರಿಯರಿಂದ ಬಳುವಳಿಯಾಗಿ ಬಂದ ಸಂಪ್ರದಾಯ, ಸಂಸ್ಕೃತಿಗಳನ್ನು ಆಚರಿಸುತ್ತಾ ವಿಶ್ವದಾದ್ಯಂತ ತನ್ನ ಪರಂಪರೆ, ಭಾಷೆ, ಆಚಾರ ವಿಚಾರಗಳಿಂದ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಕೃಷಿ ಬದುಕಿನ ನಡುವೆ ಸಾಂಪ್ರದಾಯಿಕವಾಗಿ ಬಂದ ಈ ಆಚರಣೆಗಳು ಕೌಟುಂಬಿಕವಾಗಿ ಇಂದಿಗೂ ಆಚರಿಸಲ್ಪಡುತ್ತಿರುವುದು ತುಳುವರ ಹೆಮ್ಮೆ. ನಮ್ಮ ತುಳು ಸಂಸ್ಕೃತಿ ನಮ್ಮ ಹೆಮ್ಮೆ. ಈ ವಿಶಿಷ್ಟ ಪರಂಪರೆಯನ್ನು ಉಳಿಸಿಬೆಳೆಸುವಲ್ಲಿ  ನಮ್ಮ ಹಿರಿಯರ ಕೊಡುಗೆ ಅಪಾರ.

ದಶಕಗಳ ಹಿಂದೆ ಈ ಭಾಗದಲ್ಲಿ ಕೃಷಿ ಚಟುವಟಿಕೆ ಅಕ್ಷರಶಃ ಕಡೆಗಣಿಸಲ್ಪಟ್ಟು, ನಗರೀಕರಣದ ಬದುಕಿಗೆ ಯುವಜನತೆ ಮುಖಮಾಡಿದಾಗ, ಹಿರಿಯರಿಂದ ಬಳುವಳಿಯಾಗಿ ಬಂದ ಫಲವತ್ತಾದ ಕೃಷಿ ಭೂಮಿಗಳು ಪಾಳು ಬಿದ್ದುದನ್ನು ನಾವೆಲ್ಲ ನೋಡಿದ್ದೇವೆ. ಅಲ್ಲದೇ ’ರಿಯಲ್ ಎಸ್ಟೇಟ್” ವ್ಯವಹಾರದಲ್ಲಿ ದೊರಕಬಹುದಾದದ ಲಕ್ಷ ಲಕ್ಷ ದುಡ್ಡಿನ ಎಣಿಕೆಗಾಗಿ ಅನೇಕ ಫಲವತ್ತಾದ ಕೃಷಿ ಭೂಮಿ ಕೃಷಿಯೇತರ ಭೂಮಿಯಾಗಿ ಪರಿವರ್ತನೆಗೊಂಡವು. ಅನೇಕ ಎಡರು ತೊಡರುಗಳ ನಡುವೆ ತುಳುನಾಡಿನ ಸಂಸ್ಕೃತಿ ನಾಶವಾಗುವತ್ತ ದಾಪುಗಾಲಿಟ್ಟ ಸಂದರ್ಭ

ಇಂತಹ ಸನ್ನಿವೇಶದಲ್ಲಿ ಯುವಜನತೆಯನ್ನು ಮತ್ತೆ ಕೃಷಿಯತ್ತ ಸೆಳೆಯಲು ಅನೇಕ ಸಂಘ ಸಂಸ್ಥೆಗಳು, ಬೇರೆ ಬೇರೆ ಭಾಗದಲ್ಲಿ ನೆಲೆಸಿದ ತುಳುವರನ್ನು ಮತ್ತೆ ಊರಿನತ್ತ ಕರೆಯಿಸಿ ಕೆಸರಿನಲ್ಲಿ ಆಟವಾಡುವ ಕಾರ್ಯಕ್ರಮ ಆಚರಿಸುವ ಮೂಲಕ ಅವರಲ್ಲಿ ಕೃಷಿ ಬದುಕಿನ ಕುರಿತು ಹೊಸ ಅಸ್ಥೆ ಮೂಡಿಸುವಲ್ಲಿ ಶ್ರಮಿಸಿದವು. ’ಕೆಸರ್ಡ್ ಒಂಜಿ ದಿನ’, ನೇಜಿ ನಡ್ಕ-ಬೆನ್ನಿ ಬೆನ್ಕ’ ಇತ್ಯಾದಿ ಕಾರ್ಯಕ್ರಮಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮೂಲೆ ಮೂಲೆಯಲ್ಲಿ ನಡೆದು, ದೃಶ್ಯ ಮಾದ್ಯಮ ಮೂಲಕ ವಿಶ್ವವ್ಯಾಪಿಯಾಗಿ ತುಳುವರನ್ನು ಪ್ರೇರೇಪಿಸಿತು.ಇಂದು ಕಾಲದ ಸುಳಿವಿಗೆ ಇಡೀ ಮನ ಕುಲವೇ ಆರ್ಥಿಕ ಚಟುವಟಿಕೆಗಳ ಮಂದಗತಿಯಿಂದ, ಸಾಂಕ್ರಮಿಕ ರೋಗದ ಹರಡುವಿಕೆ ತಡೆಗಟ್ಟಲು ಸರಕಾರ ತೆಗೆದುಕೊಂಡು ನಿಯಮಗಳಿಂದ ವಿಶ್ವದಾದ್ಯಂತ ಮೂಲೆಮೂಲೆಯಲ್ಲಿದ್ದವರು ಮರಳಿ ತಮ್ಮ ತಮ್ಮ ಊರಿಗೆ ಹಿಂದಿರುಗ ಬೇಕಾಯಿತು. ನಮ್ಮ ತುಳುವರು ಕೂಡ ಇದೇ ಕಾರಣದಿಂದ ಮರಳಿದ್ದು ಮಾತ್ರವಲ್ಲ, ಈ ದುಸ್ಥಿತಿಯನ್ನು  ಸದುಪಯೋಗ ಪಡಿಸಿಕೊಳ್ಳಲಿ ನೇರವಾಗಿ ತಮ್ಮ ತಮ್ಮ ಕೃಷಿ ಭೂಮಿಗೆ ಇಳಿದರು. ವಿಶೇಷವಾಗಿ ಯುವಕರು ಗುಂಪಾಗಿ ಸೇರಿ ಸ್ವಯಂ ಪ್ರೇರಣೆಯಿಂದ ಪಾಳು ಬಿದ್ದ ಕೃಷಿಭೂಮಿಯ ಉಳುಮೆಗೆ ಮುಂದಾಗಿದ್ದಾರೆ. ಇಷ್ಟು ದಿನ ಸಂಘ-ಸಂಸ್ಥೆಗಳ ಆಶ್ರದಯಲ್ಲಿ ನಡೆಯುತ್ತಿದ್ದ ಕೆಸರಿನ ಆಟ, ತುಳುನಾಡಿನ ಹೆಚ್ಚಿನ ಮನೆ ಮನೆಗಳಲ್ಲಿ ಆರಂಭವಾಗಿದೆ.ಕೃಷಿ ಇಲಾಖೆಯ ಪ್ರೋತ್ಸಾಹ ಒಂದೆಡೆ, ತಂತ್ರಜ್ಞಾನದ ಬಳಕೆಯಿಂದ ಸುಲಭಗೊಂಡ ಕೃಷಿ ಕೆಲಸಗಳು, ದೊಡ್ಡ ಮಟ್ಟದಲ್ಲಿ ಯುವ ಜನತೆಯನ್ನು ಕೆಸರಿನ ಗದ್ದೆಗೆ ಮುಖಮಾಡುವಂತೆ ಮಾಡಿದೆ. ಈ ವರ್ಷ ಕಳೆದ ಸಾಲಿಗೆ ಹೋಲಿಸಿದಲ್ಲಿ ಬಿತ್ತನೆ ಬೀಜ ಮಾರಾಟ ದುಪ್ಪಟ್ಟು ಆಗಿದ್ದಲ್ಲದೆ, ಬಿತ್ತನೆ ಬೀಜಕ್ಕಾಗಿ ಬೇಡಿಕೆಯೂ ಹೆಚ್ಚಾಗಿದೆ. ಈ  ಕೃಷಿ ಚಟುವಟಿಕೆ ಒಂದೆಡೆ ಕೆಲಸವಿಲ್ಲದೇ ಕಂಗಾಲಾಗಿದ್ದ ಹಲವು ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಿದರೆ, ಹೆಚ್ಚಿನ ಬೈಲು ಗದ್ದೆಗಳು, ಬೆಟ್ಟುಗದ್ದೆಗಳು ಮತ್ತೆ ಹಚ್ಚಹಸಿರಾಗಿ ಕಂಗೊಳಿಸುವಂತಾಗಿದೆ.ಒಟ್ಟಿನಲ್ಲಿ ತುಳುನಾಡಿನ ಭೂಮಿತಾಯಿ ಮತ್ತೆ ಮದುವಣ ಗಿತ್ತಿಯಂತೆ ಸಿಂಗಾರಗೊಂಡಿದ್ದಾಳೆ. ಹಲವು ಕಾಲದಿಂದ ಕೃಷವಾಗಿ ಬಡವಾಗಿದ್ದ ಅವಳ ಮಡಿಲನ್ನು ಬಲಪಡಿಸಲು ತುಳು ಮಕ್ಕಳು ಮುಂದಾಗಿದ್ದಾರೆ. ತುಳುವರು ಸಂಪ್ರದಾಯದಂತೆ ಆಚರಿಸುವ ತೆನೆ ಕಟ್ಟುವ (ಕದಿರು ಕಟ್ಟುವ ಹಬ್ಬ) ಹಬ್ಬಕ್ಕೆ ಬೇರೆಯವರಿಂದ, ಮಾರುಕಟ್ಟೆಯಿಂದ ತೆನೆ ತರುವ ಅಗತ್ಯವಿಲ್ಲ.  ದೀಪಾವಳಿಯ ಬಲೀಂದ್ರಪೂಜೆಗೆ ಸಂತೋಷದಿಂದ ದೀಪ ಇಡಲು ಹೋಗಬಹುದು. ಈ ಸಂಭ್ರಮ, ಸಂತಸ ಪ್ರತಿಯೊಬ್ಬ ತುಳುವರ ಮನೆಮನ ಗಳಲ್ಲಿ ನಿರಂತರವಾಗಿರಲಿ, ಇನ್ನಷ್ಟು ಪಾಳುಬಿದ್ದ ಭೂಮಿಗಳಲ್ಲಿ ಮತ್ತೆ ಬಂಗಾರದ ಬೆಳೆ ಬೆಳೆದು, ಭೂಮಿತಾಯಿ ಹಸಿರುವರ್ಣದಿಂದ ಸಸ್ಯ ಶ್ಯಾಮಲೆಯಾಗಿ ಕಂಗೊಳಿಸಲಿ ಎಂಬುದೇ ಆಶಯ.

Leave a Reply