ಮಳೆ-ಬೆಳೆ-ಅತಿವೃಷ್ಠಿ ~ ರಾಘವೇಂದ್ರ ಜಿ.ಜಿ

ಮಳೆ ಇಳೆಗೆ ಬಂದಲ್ಲಿ ಮಾತ್ರ ಬೆಳೆ ಇದು ಸರ್ವೇಸಾಮಾನ್ಯವಾಗಿ ಒಪ್ಪುವಂತಹ ಮಾತು. ಇತ್ತೀಚಿಗೆ ಎಲ್ಲೋ ಓದಿದ್ದೆ ಒಬ್ಬ ರೈತ ದೇವರಲ್ಲಿ ಪ್ರಾರ್ಥಿಸಿ ನಿನ್ನ ಅಧಿಕಾರವನ್ನು ಒಂದು ವರ್ಷದ ಮಟ್ಟಿಗೆ ನಂಗೆ ಕೊಡು ಎಂದು ಕೇಳುತ್ತಾನೆ, ಆಗ ದೇವರು ತಥಾಸ್ತು ಎಂದೇ ಬಿಡುತ್ತಾನೆ, ಆಗ ರೈತ ಆ ವರವನ್ನು ಒಮ್ಮೆ ಪ್ರಯೋಗಿಸುವ ಎಂದು ಈಗ ಮಳೆ ಬರಲಿ ಎನ್ನುತ್ತಾನೆ ಜೋರಾಗಿ ಮಳೆ ಸುರಿಯುತ್ತದೆ, ನಿಲ್ಲಲಿ ಎನ್ನುತ್ತಾನೆ, ನಿಲ್ಲುತ್ತದೆ.

ಹಾಗೆ ಗದ್ದೆ ಉಳುಮೆಯಾಗಲಿ ಎನ್ನುತ್ತಾನೆ ಗದ್ದೆ ಫಲವತ್ತಾಗಿ ಒಳ್ಳೆಯ ಉಳುಮೆಯೂ ಆಗುತ್ತದೆ, ನಂತರದಲ್ಲಿ ಬೀಜ ಬಿತ್ತುತ್ತಾನೆ, ಬಿತ್ತಿದ ಬೀಜ ಒಳ್ಳೆ ಬೆಳೆಯಲಿ ಎನ್ನತ್ತಾನೆ ಸೊಗಸಾಗಿ ಹಸಿರಸಿರಾಗಿ ಬೆಳೆಯುತ್ತದೆ, ಆದರೆ ಎಷ್ಟೇ ತಿಂಗಳು ಕಾದರೂ ಬೆಳೆದ ಸಸಿಯಿಂದ ಫಲ ಹೊರಗೆ ಹೊಮ್ಮುವುದೇ ಇಲ್ಲ, ಆಗ ಮತ್ತೆ ದೇವರ ಹತ್ತಿರ ನೀನು ಯಾಕೆ ಹೀಗೆ ಮಾಡಿದೆ ನಾನು ಎಲ್ಲಾ ಕೃಷಿ ಕಾಯಕ ನಾನು ಹೇಳಿಯೇ ಕ್ರಮಬದ್ಧವಾಗಿ ಮಾಡಿದೆ, ಆದರೆ ಈಗ ಬೆಳೆ ಬರಲೇ ಇಲ್ಲ ಏಕೆ ಎಂದು ಕುಪಿತನಾಗಿ ಹೇಳುತ್ತಾನೆ.

ಆಗ ಅಯ್ಯೋ ಮೂರ್ಖನೇ ನೀನು ನಿಂಗೆ ಬೇಕಾದದ್ದು ಎಲ್ಲಾ ನಿನ್ನ ಆಲೋಚನೆಗೆ ಸಂಬಂಧಿಸಿದಂತೆ ಕೇಳಿದೆ, ಆದರೆ ನಿನ್ನ ಆಲೋಚನೆ ಮೀರಿ ಇರೋದು ಗಾಳಿ ಅದನ್ನೇ ಮರೆತೆಯಾ, ಗಾಳಿ ಜೋರಾಗಿ ಬೀಸಿದ್ದಲ್ಲಿ ಮಾತ್ರ ಬೆಳೆದು ನಿಂತ ಸಸಿಯಿಂದ ಪೈರು ಹೊರಹೊಮ್ಮಿ ನಿನಗೆ ಫಸಲನ್ನು ಕೊಡುತ್ತದೆ ನೀನು ಒಮ್ಮೆಯಾದರೂ ಗಾಳಿ ಬೀಸಲಿ ಎಂದು ಕೇಳಲೇ ಇಲ್ಲ ಎಂದು ಹೇಳುತ್ತಾನೆ. ನಂತರ ಯೋಚಿಸಿದ ರೈತನಿಗೆ ಜ್ಞಾನೋದಯವಾಗುತ್ತದೆ.

ಇದು ಒಂದು ಕತೆಯಾದರೂ ಇಲ್ಲಿ ಗಮನಿಸಬೇಕಾದುದು ಇಷ್ಟೇ ‘ಹುಟ್ಟಿಸಿದ ದೇವರು, ಹುಲ್ಲು ಮೇಯಿಸದೇ ಇರ್ತಾನಾ’ ಈ ಗಾದೆಯಂತೆ ಕಾಲಕಾಲಕ್ಕೆ, ಗಾಳಿ ಮಳೆ ಸಮೃದ್ಧಿ ನೀಡುವುದು ಭಗವಂತ. ಆದರೆ ಮನುಕುಲದ ಲಾಲಾಸೆಯಿಂದ ಈಗ ಮಳೆಜಾಸ್ತಿ, ಮಳೆ ಹಾನಿ, ಧರೆ ಜರಿಯುವುದು, ಮನೆಗಳು ಜಲಪ್ರಳಯವಾಗುವುದು ಸಂಭವಿಸುತ್ತದೆ. 

ನೀವೇ ಊಹಿಸಿರಿ ಹಿಂದೆ ಎಷ್ಟು ಕಾಡುಗಳಿತ್ತು ಅಷ್ಟೇ ಮಳೆಯೂ ಸಹಾ ಇತ್ತು ಜಲಪ್ರಳಯದ ವಿಚಾರ ಅಷ್ಟಕಷ್ಟೇ, ಆದರೆ ಈಗ ಒಂದು ದಿನ ಬಿಡದೇ ಮಳೆ ಬಂದರೆ ಸಾಕು ಮನೆಗಳು, ರಸ್ತೆಗಳು ಜಲಾವೃತವಾಗುತ್ತದೆ. ಇದು ಗ್ರಾಮಾಂತರ ಭಾಗದಲ್ಲಿ ಧರೆ ಒತ್ತುವರಿ, ಮರಗಳ ಕಟಾವಿನಿಂದ, ಕಾಡಿನ ಮಧ್ಯೆ ರೆಸಾರ್ಟ್‌ ನಿರ್ಮಾಣ ಹೀಗೆ ಒತ್ತುವರಿಯಿಂದ ಉಂಟಾಗುವುದಾದರೇ, ಪೇಟೆಪಟ್ಟಣಗಳಲ್ಲಿ ಗದ್ದೆಯಲ್ಲಿ ಮನೆಗಳ ನಿರ್ಮಾಣದಿಂದಲೂ ಈ ತರದ ಜಲಾವೃತ ಅನುಭವಿಸಬೇಕಾಗುತ್ತದೆ.

ಉಡುಪಿಯ ಭಾಗದಲ್ಲಿ ನೀವೇ ಊಹಿಸಿ ಎಷ್ಟು ಮನೆಗಳು ಗದ್ದೆಯಲ್ಲಿ ನಿರ್ಮಾಣವಾಗಿವೇ ಎಂದು, ಕಳೆದ ಕೆಲವು ವರ್ಷಗಳ ಹಿಂದೆ ಸಗ್ರಿ ದೇವಸ್ಥಾನದ ಬಳಿಯಲ್ಲಿ ಜರುಗಿದ ಒಂದು ಯಕ್ಷಗಾನಕ್ಕೆ ಹೋಗಿದ್ದಾಗ ಮೇಳದ ಯಜಮಾನರು ಹೇಳಿದ ಮಾತು ಇನ್ನೂ ನೆನಪಿದೆ ಈ ಜಾಗದಲ್ಲಿ ಸಾಮಾನ್ಯವಾಗಿ ಆಟ ಆಗುತ್ತದೆ, ಆದರೆ ಇತ್ತೀಚಿನ ದಿನಗಳಲ್ಲಿ ಒಂದು ವರ್ಷ ಒಂದು ಗದ್ದೆಯಲ್ಲಿ ಆಟವಾಡಿದರೆ ಸಾಕು ಮತ್ತೊಮ್ಮೆ ಬಂದು ನೋಡಿದಾಗ ಅಲ್ಲಿ ನೂತನ ಮನೆ ನಿರ್ಮಾಣವಾಗಿರುತ್ತದೆ ಎಂದು.

ಆದರೆ ಇತ್ತೀಚಿನ ಬೆಳವಣಿಗೆ ಗಮನಿದಾಗ ಉಡುಪಿ ಶಾಸಕರ ‘ಹಡಿಲು ಯೋಜನೆ’ ಯಿಂದ 1500 ಎಕರೆ ಗದ್ದೆ ಪುನರ್ ಉಳುಮೆಯನ್ನು ಕಂಡಿದ್ದು ಇಲ್ಲಿ ಉಲ್ಲೇಖಿಸಬಹುದು ಹಾಗೆ ಹೊರನಾಡಿನ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ಅಮ್ಮನ ಗದ್ದೆಯಲ್ಲಿ ಪ್ರತೀ ವರ್ಷ ಗ್ರಾಮಸ್ಥರೇ ಸೇರಿ ಉಳುಮೆಮಾಡಿ ಸಸಿನೆಟ್ಟು ಭತ್ತ ಬೆಳೆಯುತ್ತಾರೆ, ಹಾಗೆ ಕರಾವಳಿ ಭಾಗ ಎಷ್ಟೋ ಪದವಿ ಕಾಲೇಜಿನ ಎನ್.ಎಸ್.ಎಸ್ ಘಟಕ ಮತ್ತು ಈಕೋ ಕ್ಲಬ್ ಗಳು ವಿದ್ಯಾರ್ಥಿಗಳ ಸಹಕಾರದಿಂದ ಭತ್ತದ ಸಸಿನೆಟ್ಟು ಫಸಲು ಪಡೆಯಲು ಸಹಕರಿಸುತ್ತಿರುವುದು ಶ್ಲಾಘನೀಯ.

ಹೀಗೆ ಅತಿವೃಷ್ಠಿಯು ಸಾಕಷ್ಟು ಪ್ರಮಾಣದಲ್ಲಿ ತೊಂದರೆ ಉಂಟುಮಾಡಿದೆ, ಎಷ್ಟೋ ಜನ 100 ರಿಂದ 150 ವರ್ಷಗಳ ಬದುಕನ್ನೇ ಕಳೆದು ಕೊಂಡಿದ್ದಾರೆ, ಪ್ರತೀ ವರ್ಷವೂ ಗುಡ್ಡಕುಸಿತದ ಸುದ್ದಿ ಬಿತ್ತರವಾದಂತೆ ಮನಸ್ಸಿಗೆ ಬೇಸವಾಗುತ್ತದೆ, ಕಳೆದೆರೆಡು ವರ್ಷಗಳ ಹಿಂದೆ ಕೊಡಗು ಮಡಿಕೇರಿಯಲಿ ಕಿ.ಲೋ.ಗಟ್ಟಲೆ ಕೃಷಿ ಜಮೀನು ಕೊಚ್ಚಿಹೋಗಿತ್ತು, ಕಳೆದ ವರ್ಷ ಭಾಗಮಂಡಲದ ಗುಡ್ಡಕುಸಿತ ಭಟ್ಟರ ಕುಟುಂಬದ ಎಲ್ಲರ ಜೀವ ಪಡೆದಿತ್ತು, ಈ ಸಲ  ತೀರ್ಥಹಳ್ಳಿ, ಶಿವಮೊಗ್ಗ, ಶಿರಸಿ, ಯಲ್ಲಾಪುರ, ಜೋಯಿಡಾ ಭಾಗದಲ್ಲಿ ಎಕರೆಗಳಷ್ಟು ಅಡಕೆ, ತೆಂಗಿನ ತೋಟಗಳು ಪ್ರವಾಹದ ನೀರಿಗೆ ಕೊಚ್ಚಿ, ಗುಡ್ಡಕುಸಿತದಿಂದ ನೆಲಸಮವಾಗಿದೆ.

ರೈತನ ಬದುಕು ಮೂರಾಬಟ್ಟೆಯಾಗಿದೆ. ಇನ್ನು ಅಧಿಕಾರಿಗಳು ಬಂದು, ಆ ಜಾಗದ ಪತ್ರಗಳ ಪರಿಶೀಲನೆ ಮಾಡಿ, ಕಳೆದುಕೊಂಡ ಆಸ್ತಿವಿವರ ಸರ್ಕಾರದ ದೃಷ್ಟಿಯಿಂದ ಲೆಕ್ಕಾಚಾರ ಮಾಡಿ, ಮೇಲ್ಮನವಿ ಸಲ್ಲಿಸಿ ಕೊನೆಗೆ ಹಣಕಾಸು ವಿಭಾಗದ ಒಪ್ಪಿಗೆ ಪಡೆದು ಮನೆ, ಜಮೀನು ಕಳೆದು ಕೊಂಡ ನಿರ್ಗತಿಕರಿಗೆ ಹಣ ಬಿಡುಗಡೆಯಾಗುವಾಗ ಮತ್ತೊಂದು ಮಳೆಗಾಲ ಶುರುವಾಗಿರುತ್ತದೆ. 

ಇಲ್ಲಿ ಯಾರ ತಪ್ಪು ಮಳೆಯದ್ದಾ- ಜನರದ್ದಾ- ಶೀಘ್ರ ಪರಿಹಾರ ಕರುಣಿಸುವಲ್ಲಿ ಪ್ರತೀ ವರ್ಷವೂ ಹಿನ್ನಡೆಮಾಡುವ ಸರ್ಕಾರಿ ಅಧಿಕಾರಿಗಳದ್ದಾ.. ಇದೇ ತರ ಯೋಚಿಸಿ ಬರೆದಾಗ ಮಾತ್ರ ಇದಕ್ಕೆ ಕೊನೆ ಇಲ್ಲವೇ ಎನ್ನುತ್ತದೆ, ಮಾಧ್ಯಮಗಳು ಹೇಗೆ ನೀರಿನಲ್ಲಿ ಮುಳುಗಿದ ಕುಟುಂಬಗಳ ಬಗ್ಗೆ ವರದಿ ಸಲ್ಲಿಸುತ್ತವೆಯೋ ಹಾಗೆಯೇ ಆ ಕುಟುಂಬಗಳಿಗೆ ಪರಿಹಾರ ಸಿಗುವ ವರೆಗೂ ಜೊತೆಯಿರಬೇಕು. 

ಇದೇ ತರ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಪೇಟೆ ಮತ್ತು ಹಳ್ಳಿ ಅನ್ ಸೇಫ್ @ ಮಳೆಗಾಲ ಎಂದೆನಿಸಲು ಶುರುವಾಗತ್ತದೆ. ಈ ಸಂದರ್ಭದಲ್ಲಿ ಈವರೆಗೂ ಆದ ಅತಿವೃಷ್ಠಿ ಪ್ರವಾಹದಿಂದ ಸಂಕಷ್ಟಕ್ಕೀಡಾದ ಕುಟುಂಬಕ್ಕೆ ಒಂದು ಸಾಂತ್ವನವಾದರೂ ಹೇಳೋಣ ಅಲ್ವಾ..

 

 
 
 
 
 
 
 
 
 

Leave a Reply