ತಪ್ಪುಗಳಿಲ್ಲದ ಆಧುನಿಕ ಕೃಷಿ ಪದ್ಧತಿಯಿಂದ ಅಧಿಕ ಇಳುವರಿ​ ​ಅಧಿಕ ಲಾಭ -ರಾಮಕೃಷ್ಣ ಶರ್ಮಾ

ಶಿರ್ವ:-​ ತಮ್ಮ ಕೃಷಿ ಪದ್ಧತಿಯನ್ನು ಬದಲಾಯಿಸಬೇಕಾಗಿದೆ. ಗಿಡಗಳಿಗೆ ಏನು ಬೇಕು, ಯಾವಾಗ ಬೇಕು, ಎಷ್ಟು ಬೇಕು ಅದನ್ನು ತಿಳಿದುಕೊಂಡು,  ವ್ಯವಸ್ಥಿತ ರೀತಿಯಲ್ಲಿ ಕೊಟ್ಟಾಗ ಅತ್ಯಧಿಕ ಇಳುವರಿ ಪಡೆಯುವ ಆಧುನಿಕ ತಂತ್ರಜ್ಞಾನ ಬಂದಿದೆ. 

ತಪ್ಪುಗಳಿಲ್ಲದ ಆಧುನಿಕ ಕೃಷಿ ಪದ್ಧತಿಯಿಂದ ಅಧಿಕ ಲಾಭ ಗಳಿಸಬಹುದಾಗಿದೆ. ವೈಜ್ಞಾನಿಕ ಕೃಷಿಯಲ್ಲಿ ೨೫ ಪಾಲು ಖರ್ಚು ೭೫ ಪಾಲು ಲಾಭ ಬರುತ್ತದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ, ಪ್ರಗತಿಪರ ಕೃಷಿಕ ಬಂಟಕಲ್ಲು ರಾಮಕೃಷ್ಣ ಶರ್ಮಾ ತಿಳಿಸಿದರು.

ಅವರು ಶುಕ್ರವಾರ ಆರ್ಗ್ಯಾನಿಕ್ ಕೃಷಿಕರ ಸಂಘ ಶಿರ್ವ ಇದರ ವತಿಯಿಂದ ರಾಂಜೆಸ್ ಗಾರ್ಡನ್ ಶಿರ್ವ ಕೋಡು ಎಂಬಲ್ಲಿ ಜರುಗಿದ “ವೈಜ್ಞಾನಿಕ ಕೃಷಿ ಮಾಹಿತಿ ಕಾರ್ಯಾಗಾರ”ದಲ್ಲಿ ಭಾಗವಹಿಸಿ ಮಾತನಾಡುತ್ತಾ, ಸರಕಾರದಿಂದ ರೈತರಿಗೆ ನೂರಾರು ಸೌಲಭ್ಯಗಳು ಸಿಗುತ್ತಿವೆ, ಆದರೆ ರೈತರು ಕೃಷಿಯಲ್ಲಿ ವೈಜ್ಞಾನಿಕ ಕ್ರಮ ಅಳವಡಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ, ಅದಕ್ಕಾಗಿಯೇ ಜಿಲ್ಲಾ ಕೃಷಿಕ ಸಂಘ ಜಿಲ್ಲೆಯಾದ್ಯಂತ ಕೃಷಿಕರ ಮನೆಬಾಗಿಲಿಗೆ ಬಂದು ಉಚಿತವಾಗಿ ಈ ಮಾಹಿತಿ ನೀಡುವತ್ತ ಸಕ್ರೀಯವಾಗಿದೆ ಎಂದರು.
ಕಾರ್ಯಕ್ರಮವನ್ನು ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಆರ್.ಪಾಟ್ಕರ್ ಉದ್ಘಾಟಿಸಿ ಮಾತನಾಡುತ್ತಾ, ಗ್ರಾಮದಲ್ಲಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಶಸ್ತಿ ವಿಜೇತ ಪ್ರಗತಿಪರ ಕೃಷಿಕ ಆ್ಯಂಡ್ರೂ ಮೋನಿಸ್  ನೇತೃತ್ವದ ತಂಡ ಉತ್ತಮ ಕಾರ್ಯ ಮಾಡುತ್ತಿದೆ. ಗ್ರಾಮಾಭಿವೃದ್ದಿಯಲ್ಲಿ ಗ್ರಾಮಸ್ಥರು ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವುದು ಅಭಿನಂದನೀಯ ಎಂದರು.

ಈ ಸಂದರ್ಭದಲ್ಲಿ ನೂತನ ಪಂಚಾಯತ್ ಅಧ್ಯಕ್ಷ ಕೆ.ಆರ್.ಪಾಟ್ಕರ್, ಕೃಷಿಕ ಸಂಘದ ಜಿಲ್ಲಾಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ಪಂಚಾಯತ್ ನೂತನ ಸದಸ್ಯೆ ಜೆಸಿಂತಾ ಮೇಬಲ್ ಡಿಸೋಜರವರನ್ನು ಆರ್ಗ್ಯಾನಿಕ್ ಕೃಷಿಕರ ಸಂಘ ಶಿರ್ವ ಇದರ ವತಿಯಿಂದ ಸನ್ಮಾನಿಸಲಾಯಿತು.   ಸಮಾರಂಭದ ಅಧ್ಯಕ್ಷತೆಯನ್ನು ಆರ್ಗ್ಯಾನಿಕ್ ಕೃಷಿಕರ ಸಂಘ ಶಿರ್ವ ಇದರ ಅಧ್ಯಕ್ಷ ಆ್ಯಂಡ್ರೂ ಮೋನಿಸ್  ವಹಿಸಿದ್ದರು.

ರೊನಾಲ್ಡ್ ಡಿಸೋಜ, ಮೈಕಲ್ ಡಿಸೋಜ,  ರೂಸಿ ಡಿಸೋಜ ಪರಿಚಯಿಸಿದರು. ರಿಚಾರ್ಡ್, ಡಯಾನಾ, ಲಿಂಡಾ, ವಲೇರಿಯನ್ ಸಹಕರಿಸಿದರು. ನಿವೃತ್ತ ಶಿಕ್ಷಕ  ಜೋಸೆಫ್ ಪೀಟರ್ ನಜ್ರೆತ್ ನಿರೂಪಿಸಿದರು. ಲೊರಿಟಾ ಧನ್ಯವಾದವಿತ್ತರು.
 
 
 
 
 
 
 
 
 

Leave a Reply