ಮಾರ್ಚ್ 20- 21ರಂದು ಉಡುಪಿ ಮಣಿಪಾಲದ ಆರ್.ಎಸ್.ಬಿ ಸಭಾಭವನದಲ್ಲಿ  ಕೊಂಕಣಿ ಸಾಹಿತ್ಯ ಸಮ್ಮೇಳನ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಉಡುಪಿಯಲ್ಲಿ ಸಮಾನ ಮನಸ್ಕರು ರಚಿಸಿದ ಸಂಘಟನಾ ಸಮಿತಿಯ ಉಸ್ತುವಾರಿಯಲ್ಲಿ ಎರಡು ದಿನದ ಕೊಂಕಣಿ ಸಾಹಿತ್ಯ ಸಮ್ಮೇಳ ನದ ಪೂರ್ವಭಾವಿಯಾಗಿ ಗುರುವಾರ ಉಡುಪಿಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು.

ಈ ಸಮ್ಮೇಳನದ ಪೂರ್ವಭಾವಿ ಸಭೆಗಳು ನಡೆದು ತಯಾರಿ ಭರದಿಂದ ನಡೆಯುತ್ತಿವೆ. ಈ ಸಮ್ಮೇಳನವನ್ನು ಸಂಘಟಿಸುವ ಸಲುವಾಗಿ ಅನೇಕ ಸಂಘಟಕರು ಸೇರಿ ಒಂದು ಸಮಿತಿಯನ್ನು ರಚಿಸಿದ್ದು, ಆ ಸಮಿತಿಯ ಗೌರವಾಧ್ಯಕ್ಷರಾಗಿ ಗೋಕುಲದಾಸ್ ನಾಯಕ್, ಅಧ್ಯಕ್ಷರಾಗಿ ಅಕಾಡೆಮಿಯ ಅಧ್ಯಕ್ಷರು ಡಾ. ಜಗದೀಶ್ ಪೈ, ಕಾರ್ಯಾಧ್ಯಕ್ಷರಾಗಿ ಮಹೇಶ್ ಠಾಕೂರ್, ಪ್ರಧಾನ ಕಾರ್ಯದರ್ಶಿಯಾಗಿ ಅಮೃತ್ ಶೆಣೈ, ಪ್ರಧಾನ ಸಂಚಾಲಕರಾಗಿ ಪೂರ್ಣಿಮ ಸುರೇಶ್, ಗೌರವ ಸಲಹೆಗಾರರಾಗಿ ಕುಯಿಲಾಡಿ ಸುರೇಶ್ ನಾಯಕ್ ಹಾಗೂ ಅನೇಕ ಗಣ್ಯರು ಸಮಿತಿಯಲ್ಲಿ ಇದ್ದಾರೆ.

ಮಾರ್ಚ್ 20 ರಂದು ಮಧ್ಯಾಹ್ನ 3 ಗಂಟೆಗೆ ಕೊಂಕಣಿ ಶೋಭಾಯಾತ್ರೆ ನಡೆಯಲಿದ್ದು ಇದಕ್ಕೆ ಮಣಿಪಾಲದ  ಟಿ.ಅಶೋಕ್.ಪೈ ಚಾಲನೆ ನೀಡಲಿದ್ದಾರೆ. ಶೋಭಾಯಾತ್ರೆಯ ಬಳಿಕ ಉದ್ಘಾಟನಾ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗಿಯಾಗಲಿದ್ದು ಕೊಂಕಣಿ ಭಾಷೆ ಮಾತನಾಡುವಂತಹ ಸುಮಾರು 42 ಪಂಗಡಗಳ ಪ್ರತಿನಿಧಿಗಳಾಗಿ,  ದೇಶ ವಿದೇಶಗಳಲ್ಲಿ ಹಲವಾರು ಸಾಧನೆ ಮಾಡಿದಂತಹ ಗಣ್ಯಾತಿಗಣ್ಯರು ಆಗಮಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಹಿರಿಯ ನಟ ಅನಂತನಾಗ್ ಸೇರಿದಂತೆ ಕೊಂಕಣಿ ಭಾಷೆಗಾಗಿ ಸಾಮಾಜಿಕ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸನ್ಮಾನ ನಡೆಯಲಿದೆ. ಎರಡು ದಿನಗಳ ಕಾಲ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕವಿಗೋಷ್ಠಿ, ಕಥಾಗೋಷ್ಠಿ, ಸಂಗೀತಗೋಷ್ಠಿ ಹಾಗೂ ಮನೋರಂಜನಾ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಭಾರತದಲ್ಲಿ ಪ್ರಮುಖ 3 ಧರ್ಮಗಳ ಅನುಯಾಯಿಗಳಲ್ಲಿ ಕೆಲವು ಪಂಗಡದವರು ಮಾತೃ ಭಾಷೆಯಾಗಿ ಮಾತನಾಡುವ ಏಕೈಕ ಭಾಷೆ ಕೊಂಕಣಿ. ಹಾಗಾಗಿ ಇದು ಕೇವಲ ಭಾಷೆಯಲ್ಲ, ಸಾಮರಸ್ಯ ಹಾಗೂ ಸೌಹಾರ್ದತೆಯ ಪ್ರತೀಕವಾಗಿದೆ. ಈ ಭಾಷೆಯನ್ನು ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹಾಗಾಗಿ ಇಂತಹ ಸಮಾವೇಶಗಳು ಅತ್ಯಗತ್ಯ.

ಪತ್ರಿಕಾಗೋಷ್ಠಿಯಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಕಮಲಾಕ್ಷ ಶೇಟ್, ವಸಂತ ನಾಯಕ್, ರಾಮದಾಸ್ ಪೈ, ಗೀತಾ ಶೇಟ್, ಗಣೇಶ್ ಪ್ರಸಾದ್ ಜಿ. ನಾಯಕ್, ಜೋಸೆಫ್ ಜಿ.ಎಮ್.ರೆಬೆಲ್ಲೋ, ರಾಘವೇಂದ್ರ ಪ್ರಭು ಕರ್ವಾಲು, ಸುಹರ್ಷಾ ಭಟ್, ನೀತಾ ಪ್ರಭು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply