ಕಾಪು ಲೈಟ್ ಹೌಸ್ ಗೆ ತೆರಳುವ ಕಾಲು ದಾರಿ ಮುಳುಗಡೆ

  • ಕಾಪು: ಕಳೆದೆರಡು ದಿನಗಳಿಂದ ಉಡುಪಿ ಜಿಲ್ಲೆಗಳಲ್ಲಿ ನಿರಂತರವಾಗಿ ಸುರಿದ ಮಳೆ ಕೊಂಚ ಕಡಿಮೆಯಾಗಿದ್ದು ಹಲವು ಜಲಾವೃತ ಪ್ರದೇಶದಲ್ಲಿ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ. ಆದ್ದರಿಂದ ಮಳೆಯಿಂದ ಆದ ಹಾನಿ ಸರಿಯಾಗಿ ಕಂಡು ಬರುತ್ತದೆ.

ಪ್ರಸಿದ್ಧ ಕಾಪು ಲೈಟ್ ಹೌಸ್ ಬಳಿ ಇರುವ ಹೊಳೆಯ ನೆರೆ ನೀರು ತಾನು ಹರಿಯುವ ದಿಕ್ಕು ಬದಲಿಸಿ ಸಮುದ್ರವನ್ನು ಸೇರುತ್ತಿದೆ. ಬಹಳ ಹಿಂದೆ ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಗೊಂಡಿದ್ದ ಕಾಪು ಬೀಚ್ ನಲ್ಲಿರುವ ಲೈಟ್ ಹೌಸ್ ನ ಹಿಂಭಾಗದಲ್ಲಿ ಹೊಳೆ ಮತ್ತು ಸಮುದ್ರ ಸೇರುವ ಪ್ರದೇಶ ವಿದ್ದು, ರವಿವಾರ ಸಂಜೆಯ ವೇಳೆ ಹೊಳೆ ಹರಿಯುವ ದಿಕ್ಕನ್ನು ಬದಲಾಯಿಸಿದೆ.

ಸದ್ಯ ಲೈಟ್ ಹೌಸಿಗೆ ಹೋಗುವ ಕಾಲು ದಾರಿ ಮಳೆಗೆ ಮುಳುಗಡೆಗೊಂಡಿದೆ. ಲೈಟ್ ಹೌಸ್ ನ ಹಿಂದಿನ ದಾರಿಯಲ್ಲಿ ಹರಿಯಬೇಕಿದ್ದ ನೀರು ಅದರ ಮುಂಭಾಗದಲ್ಲಿ ಸಮುದ್ರವನ್ನು ಸೇರುತ್ತಿರುವ ಕಾರಣ ಲೈಟ್ ಹೌಸಿ ಗೆ ತೆರಳುವ ದಾರಿ, ಅದರ ಪ್ರವೇಶದ ಮೆಟ್ಟಿಲುಗಳು, ಶೌಚಾಲಯ ಬಳಿಯ ಸಿಮೆಂಟ್ ಸ್ಲಾಬ್ ಮತ್ತು ಪಾತ್ ವೇ ಕೊಚ್ಚಿ ಹೋಗಿವೆ.

ಇನ್ನು ಕಾಪು ಪಡು ಗ್ರಾಮ, ಗರಡಿ ಪ್ರದೇಶ, ಸುಬ್ಬಯ್ಯ ತೋಟ, ಬೈರು ಗುತ್ತು ತೋಟ ಸೇರಿದಂತೆ ಇನ್ನು ಹಲವೆಡೆ ಯಿಂದ ಸಂಗ್ರಹವಾಗಿ, ಈ ಹೊಳೆಯ ಮೂಲಕ ಹರಿದು ಬರುತ್ತಿರುವ ಮಳೆ ನೀರು ಲೈಟ್ ಹೌಸ್‌ನ ಮುಂಭಾಗ ದಿಂದಲೇ ಸಮುದ್ರ ಸೇರುತ್ತಿದೆ. ಇದರಿಂದ ಕಾಪು ಲೈಟ್ ಹೌಸ್‌ಗೆ ಹೋಗುವ ಸಂಪರ್ಕ ಕಡಿತಕ್ಕೊಳಗಾಗಿದೆ ,ಸೋಮವಾರವೂ ಇದೇ ರೀತಿ ವರುಣಾರ್ಭಟ ಮುಂದುವರಿದರೆ‌ ಇನ್ನಷ್ಟು ಅಪಾಯವಾಗುವ ಆತಂಕವಿದೆ.
ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ, ಪುರಸಭಾ ಸದಸ್ಯರು ಮತ್ತು ಲೈಟ್ ಹೌಸ್ ಡಿಪಾರ್ಟ್‌ ಮೆಂಟ್‌ನ ಸಿಬ್ಬಂಧಿಗಳು ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ದೃಶ್ಯವನ್ನು ವೀಕ್ಷಿಸಲು ಸೋಮವಾರ ಬೆಳಗ್ಗಿನಿಂದಲೇ ಜನರು ಆಗಮಿಸುತ್ತಿದ್ದಾರೆ.

Leave a Reply