ಜಿಲ್ಲೆಯಲ್ಲಿ ಕನ್ನಡ ಬಳಕೆ ಕಡ್ಡಾಯ -ಜಿ.ಜಗದೀಶ್

ಉಡುಪಿ : ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳು, ಉದ್ದಿಮೆಗಳು,ಕಾರ್ಖಾನೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಛೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸ್ತುತ ಕನ್ನಡ ಕಾಯಕ ವರ್ಷವನ್ನು ಆಚರಿಸಲಾಗುತ್ತಿದ್ದು, ಈ ಕುರಿತು ಸರ್ಕಾರದಿಂದ ನೀಡಿರುವ ಅಧಿಕೃತ ಚಿಹ್ನೆಯನ್ನು ಎಲ್ಲಾ ಸರ್ಕಾರಿ ಇಲಾಖೆಗಳು ತಮ್ಮ ದೈನಂದಿನ ಪತ್ರ ವ್ಯವಹಾರಗಳಲ್ಲಿ ಕಡ್ಡಾಯವಾಗಿ ಬಳಸುವಂತೆ ಸೂಚನೆ ನೀಡಿದ್ದಾರೆ. ಇಲಾಖೆಗಳು ತಮ್ಮ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್, ನಲ್ಲಿ ಕನ್ನಡವನ್ನು ಪ್ರಧಾನವಾಗಿ ಬಳಸಬೇಕು, ಗಣಕಯಂತ್ರದಲ್ಲಿ ಸಂಪೂರ್ಣವಾಗಿ ಕನ್ನಡ ತಂತ್ರಾಂಶವನ್ನು ಅಳವಡಿಸಬೇಕು, ವಾಹನಗಳಲ್ಲಿ ಸಂಖ್ಯಾಫಲಕ, ಸರ್ಕಾರಿ ವಾಹನಗಳ ನಾಮಫಲಕಗಳಲ್ಲಿ , ಮೈಲುಗಳಲ್ಲಿ, ಹೆದ್ದಾರಿ ಫಲಕಗಳಲ್ಲಿ ಕನ್ನಡವನ್ನು ಪ್ರಧಾನವಾಗಿ ಬಳಸಬೇಕು , ಜಿಲ್ಲಾ ಪಂಚಾಯತ್ ನ ಕೆ.ಡಿ.ಪಿ ಸಭೆಗಳಲ್ಲಿ ಕನ್ನಡವನ್ನು ಒಂದು ಅಂಶವಾಗಿ ಚರ್ಚಿಸಬೇಕು ಎಂದಿದ್ದಾರೆ.ಹಾಗೆ ನಗರಸಭೆ ವ್ಯಾಪ್ತಿಯ ಗೋಡೆಗಳಲ್ಲಿ ಕನ್ನಡ ಕವಿಗಳ ಚಿತ್ರಗಳನ್ನು ಹಾಗೂ ಕನ್ನಡ ಅಕ್ಷರ ಮಾಲೆಗಳನ್ನು ರಚಿಸುವ ಮೂಲಕ ಕನ್ನಡ ಜಾಗೃತಿ ಮೂಡಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಲ್ಲಾ ಬ್ಯಾಂಕುಗಳಲ್ಲಿ ಅರ್ಜಿ ನಮೂನೆಗಳನ್ನು ಕನ್ನಡದಲ್ಲಿ ಮುದ್ರಿಸುವ ಕುರಿತಂತೆ ಲೀಡ್ ಬ್ಯಾಂಕ್ ಮೆನೇಜರ್ ಗೆ ಸೂಚಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇರ್ಶಕ ಕುಮಾರ ಬೇಕ್ಕೆರಿ ಮಾತನಾಡಿ ಕನ್ನಡವನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಆಡಳಿತದ ಎಲ್ಲಾ ವಲಯಗಳಲ್ಲಿ ಕನ್ನಡಪರ ಆದೇಶಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸುವುದು ಅಗತ್ಯ. ಕನ್ನಡ ಪರ ಆದೇಶ ಮತ್ತು ಸುತ್ತೋಲೆಗಳ ಸಂಕಲನವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಾಲತಾಣದಲ್ಲಿ ಲಭ್ಯ ಎಂದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಕನ್ನಡ ಜಾಗೃತಿ ಸಮಿತಿಯ ಸದಸ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ , ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು, ರಂಗಭೂಮಿ (ರಿ) ನ ಪ್ರದೀಪ್‌ಚಂದ್ರ ಕುತ್ಪಾಡಿ, ದೀಪಿಕಾ ಭಟ್, ಶಿಲ್ಪಾ ಜೋಶಿ ಆತ್ರಾಡಿ
ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply