ಹಾಲು ಉತ್ಪಾದಕರ ಪ್ರತ್ಯೇಕ ಬ್ಯಾಂಕ್ – ರಾಜ್ಯ ಸರ್ಕಾರದಿಂದ ಮೂಲಬಂಡವಾಳ ಘೋಷಣೆ ಸ್ವಾಗತಾರ್ಹ: ಸಾಣೂರು ನರಸಿಂಹ ಕಾಮತ್

ಹಾಲು ಉತ್ಪಾದಕರ ಅಭಿವೃದ್ಧಿ ಮತ್ತು ಆರ್ಥಿಕ ಸುಧಾರಣೆ ಗಾಗಿ ಕೆಎಂಎಫ್ ಹಾಲು ಉತ್ಪಾದಕರಿಗೆ ಪ್ರತ್ಯೇಕ ಬ್ಯಾಂಕ್ ಸ್ಥಾಪಿಸಬೇಕೆಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿರುವ ಸಲಹೆ ಹಾಗೂ ಇದಕ್ಕೆ ಪೂರಕವಾಗಿ ರಾಜ್ಯ ಸರಕಾರದಿಂದ 100 ಕೋಟಿ ರೂಪಾಯಿ ಬಂಡವಾಳ ನೀಡುತ್ತೇವೆ ಎಂದು ಘೋಷಣೆ ಮಾಡಿರುವುದು ಸ್ವಾಗತಾರ್ಹ. 

ಮುಖ್ಯಮಂತ್ರಿಯ ಈ ಆಶಯ ಸಹಕಾರವಲಯದಲ್ಲಿಯೇ ಒಂದು ವಿಭಿನ್ನ ಚಿಂತನೆಯನ್ನು ಹುಟ್ಟುಹಾಕಿದೆ.ಹಾಲು ಉತ್ಪಾದಕರ ಸಂಘಗಳಿಗಾಗಿಯೇ ಪ್ರತ್ಯೇಕ ಬ್ಯಾಂಕ್ ಸ್ಥಾಪನೆಯಾದಲ್ಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹಾಲು ಉತ್ಪಾದಕರ ಸಂಘಗಳನ್ನು ಸ್ವಾವಲಂಬಿಯಾಗಿಸಲು ಸಾಧ್ಯ ಎಂದು ಮುಖ್ಯಮಂತ್ರಿಯವರು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೃಷಿಯಲ್ಲಿ ತೊಡಗಿರುವ ರೈತಾಪಿ ಬಂಧುಗಳಿಗೆ ನೀಡಿರುವ ರಿಯಾಯಿತಿ ಬಡ್ಡಿದರದ, ಸರಳ ದಾಖಲೆಗಳ, ಸುಲಭ ಸಾಲ ಸೌಲಭ್ಯ ಕಿಸಾನ್ ಕ್ರೆಡಿಟ್ ಕಾರ್ಡನ್ನು ಹೈನುಗಾರಿಕೆಗೆ ವಿಸ್ತರಿಸಿದ್ದರರೂ ಕೂಡ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳು ಹೈನುಗಾರರಿಗೆ ಈ ಸೌಲಭ್ಯವನ್ನು ನೀಡಲು ಹಿಂದೇಟು ಹಾಕುತ್ತಿವೆ.

ಕೆಎಂಎಫ್ ತನ್ನದೇ ಆದಂತಹ ಬ್ಯಾಂಕಿಂಗ್ ವ್ಯವಸ್ಥೆಯನ್ನು ರೂಪಿಸಿದಲ್ಲಿ ಹೈನುಗಾರಿಕಾ ಚಟುವಟಿಕೆಗಳ ಅಭಿವೃದ್ಧಿ, ವಿಸ್ತರಣೆ, ಹೊಸ ಡೈರಿಗಳ ಸ್ಥಾಪನೆ, ಹೈನುಗಾರಿಕಾ ಕ್ಷೇತ್ರದಲ್ಲಿ ಯಾಂತ್ರೀಕರಣ ಮತ್ತು ತಂತ್ರ ಜ್ಞಾನದ ಬಳಕೆಗೆ ಅವಕಾಶದ ಬಾಗಿಲು ತೆರೆಯಲಿದೆ ಎಂದು ನರಸಿಂಹ ಕಾಮತ್ ಹೇಳಿದ್ದಾರೆ.

ಹೈನುಗಾರರು ತಮ್ಮ ಹಣಕಾಸಿನ ಅವಶ್ಯಕತೆಗಳಿಗಾಗಿ ಇತರ ಬ್ಯಾಂಕುಗಳಿಗೆ ಅಲೆದಾಡುವುದು ತಪ್ಪುತ್ತದೆ.ಹಾಲು ಉತ್ಪಾದಕರ ಸಂಘಗಳು ಹೈನುಗಾರರ ವಿವಿಧೋದ್ದೇಶ ಸಂಘಗಳಾಗಿ ಮಾರ್ಪಾಡು ಹೊಂದಬೇಕು.ಸಹಕಾರಿ ಕಾಯ್ದೆಯಲ್ಲಿ ಇದಕ್ಕೆ ಅವಕಾಶವಿದ್ದು,ಈಗಾಗಲೇ ಸ್ವಂತ ಕಟ್ಟಡ ಇತರ ಮೂಲಭೂತ ಸೌಕರ್ಯಗಳನ್ನು ಹೊಂದಿರುವ,ಆರ್ಥಿಕವಾಗಿ ಸದೃಢವಾಗಿರುವ ಹಾಲು ಉತ್ಪಾದಕರ ಸಂಘಗಳು ಪ್ರಥಮ ಹಂತದಲ್ಲಿ ಹೈನುಗಾರ ಸದಸ್ಯರಿಗೆ ಪಡಿತರ ವ್ಯವಸ್ಥೆ, ಜನ ಔಷಧಿ ಕೇಂದ್ರ, ಡಿಜಿಟಲ್ ಸೇವಾ ಕೇಂದ್ರ, ಕೃಷಿ ಮತ್ತು ಹೈನುಗಾರಿಕೆ ಯಂತ್ರೋಪಕರಣಗಳ ಮಾರಾಟ ಮತ್ತು ದುರಸ್ತಿ ಮುಂತಾದ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬಹುದು.

ಗ್ರಾಮೀಣ ಭಾಗದ ಹೈನುಗಾರರು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ನಿಯಮಿತವಾಗಿ ನಿಗದಿತ ಸಮಯದಲ್ಲಿ ಹಾಲು ಪೂರೈಕೆ ಕೇಂದ್ರಗಳಿಗೆ ಭೇಟಿ ನೀಡಲಾಗುತ್ತಿದೆ. ಆ ಸಂದರ್ಭದಲ್ಲಿಯೇ ಸಂಘದ ಆವರಣದಲ್ಲಿಯೇ ಅವರಿಗೆ ದಿನಬಳಕೆಯ ವಸ್ತುಗಳು ಮತ್ತು ದೈನಂದಿನ ಅವಶ್ಯಕತೆಗಳಿಗೆ ಅನುಕೂಲ ಒದಗಿಸಿದರೆ ಗ್ರಾಮೀಣ ಭಾಗದ ಜನಜೀವನದಲ್ಲಿ ಹೊಸ ಬದಲಾವಣೆ ಮತ್ತು ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಉಡುಪಿ ಜಿಲ್ಲಾ ಸಹಕಾರ ಭಾರತಿ ಹಾಲು ಪ್ರಕೋಷ್ಠದ ಸಂಚಾಲಕ ಹಾಗೂ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಸಾಣೂರು ನರಸಿಂಹ ಕಾಮತ್ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply