ಹೆಣ್ಣುಮಕ್ಕಳಿಗೆ,ತಾಯಂದಿರಿಗೆ ಅಧಿಕ ಪೋಷಕಾಂಶ ಇರುವ ಆಹಾರ ಕೊಡಬೇಕು – ಡಾ.ನವೀನ್ ಭಟ್

ಶಿರ್ವ:- ಹೆಣ್ಣುಮಕ್ಕಳಿಗೆ ಪ್ರೌಢಾವಸ್ಥೆಯಲ್ಲಿ ಅಧಿಕ ಪೋಷಕಾಂಶ ಇರುವ ಆಹಾರ ಅಗತ್ಯ. ವಿವಿಧ ಆಹಾರವಸ್ತುಗಳಲ್ಲಿರುವ ಪೋಷಕಾಂಶಗಳ ಬಗ್ಗೆ ತಿಳಿಸಬೇಕು. ನಿತ್ಯ ಆರೋಗ್ಯವರ್ಧಕ ದಿನಚರಿ ಕಲಿಯಬೇಕು. ಪ್ರಜ್ಞಾವಂತ ನಾಗರಿಕರಾಗಿ ದೇಶಕ್ಕೆ ಉತ್ತಮ ಕೊಡುಗೆ ನೀಡುವಂತಾಗಲು ದೈಹಿಕ ಆರೋಗ್ಯ ಮುಖ್ಯ. ಸೊಪ್ಪುತರಕಾರಿಗಳು, ಮೊಳಕೆಬರಿಸಿದ ಕಾಳುಗಳು, ಹಾಲು, ಹಾಲಿನ ಉತ್ಪನ್ನಗಳು,ಮೊಟ್ಟೆಯಲ್ಲಿ ಅಧಿಕ ಪೋಷಕಾಂಶಗಳಿದ್ದು, ಹೆಣ್ಣುಮಕ್ಕಳಿಗೆ,ತಾಯಂದಿರಿಗೆ ಅಧಿಕ ಪೋಷಕಾಶ ಇರುವ ಆಹಾರ ಕೊಡಬೇಕು ಎಂದು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ನುಡಿದರು.

ಬುಧವಾರ ಮೂಡುಬೆಳ್ಳೆ ಗೀತಾಮಂದಿರದಲ್ಲಿ ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಶಿಶು ಅಭಿವೃದ್ಧಿ ಯೋಜನೆ, ಬೆಳ್ಳೆ ಗ್ರಾಮ ಪಂಚಾಯತ್ ಇದರ ಆಶ್ರಯದಲ್ಲಿ ಜರುಗಿದ “ಪೋಷಣ್ ಅಭಿಯಾನ” ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಜ್ಯೋತಿ ಪ್ರಜ್ವಲನದ ಮೂಲಕ ಉದ್ಘಾಟಿಸಿ ಮಾತನಾಡಿದರು.

ಪೆರ್ಣಂಕಿಲ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ರವೀಂದ್ರ ಬೋರ್ಕಾರ್ ಮಾತನಾಡಿ ಆಹಾರ ಹಸಿವು ನೀಗಿಸಲು ಮಾತ್ರವಲ್ಲದೆ ಪೋಷಕಾಂಶಯುಕ್ತ ಆಹಾರಗಳು ದೇಹದ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಾಗಿದೆ. ಮೂರು ವರ್ಷಗಳ ಅವಧಿಯಲ್ಲಿ ನಡೆದ ಪೋಷಣ್ ಅಭಿಯಾನದಲ್ಲಿ ಹಮ್ಮಿಕೊಳ್ಳಲಾಗಿರುವ ಮುಖ್ಯ ಅಂಶಗಳ ಬಗ್ಗೆ ಮಾಹಿತಿ ನೀಡಿ, ಕೈತೋಟದ ರಚನೆ,ಯೋಗ ಮತ್ತು ಅಯುರ್ವೇದದ ಬಗ್ಗೆ ಮಾಹಿತಿ, ಅಪೌಷ್ಠಿಕತೆ ಇರುವ ಮಕ್ಕಳ ಆರೋಗ್ಯವರ್ಧನೆಗೆ ಕ್ರಮ, ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದಲ್ಲದೆ ಗ್ರಾಮದಲ್ಲಿ ಕೋವಿಡ್ ಜಾಗೃತಿ,ಲಸಿಕಾ ಅಭಿಯಾನದ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಪತ್ರಕರ್ತ ಬಿ.ಪುಂಡಲೀಕ ಮರಾಠೆ ಮಾತನಾಡಿ ನಮ್ಮ ಹಿರಿಯರ ಹಾಗೂ ಈಗಿನ ಆಹಾರಶೈಲಿಯ ಬಗ್ಗೆ ಮಾಹಿತಿ ನೀಡಿ ಸ್ವಯಂ ಶಿಸ್ತು,ಸ್ವಚ್ಛತೆ, ಆರೋಗ್ಯಪೂರ್ಣ ದಿನಚರಿಯ ಬಗ್ಗೆ ತಿಳಿಸಿದರು. ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ವೀಣಾ ವಿವೇಕಾನಂದ್ ಪ್ರಾಸ್ತಾವಿಕ ಮಾತುಗಳಲ್ಲಿ “ಪೋಷಣ್ ಅಭಿಯಾನ”ದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ ಪೂಜಾರಿ ವಹಿಸಿ ಸಹಕರಿಸಿದ ಎಲ್ಲಾ ಇಲಾಖಾ ಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಗರ್ಭಿಣಿ ಮಹಿಳೆಯರಿಗೆ, ಸಾಧಾರಣ ಅಪೌಷ್ಠಿಕತೆ ಇರುವ ಮಕ್ಕಳಿಗೆ ಹಣ್ಣು ಹಂಪಲು ಕಿಟ್ ವಿತರಿಸಲಾಯಿತು. 

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸಂಧ್ಯಾ ಎಂ.ಶೆಟ್ಟಿ, ತಾ.ಪಂ.ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಸಾಮಾಜಿಕ ನ್ಯಾಯ ಸಮಿತಿಯ ಶಿಲ್ಪಾ, ಗ್ರಾ.ಪಂ. ಸದಸ್ಯರುಗಳಾದ ಶಶಿಧರ ವಾಗ್ಲೆ, ರಾಜೇಂದ್ರ ಶೆಟ್ಟಿ, ರಂಜನಿ ಹೆಗ್ಡೆ, ಗುರುರಾಜ ಭಟ್, ಪರಶುರಾಮ ಭಟ್, ಪ್ರೇಮಾವೆಂಕಟೇಶ್, ಸಂತೋಷ್ ಕುಲಾಲ್, ಮೇರಿ ಡಿಸೋಜ, ದಿವ್ಯಾ ಆಚಾರ್ಯ, ರಕ್ಷಿತಾ ಪೂಜಾರಿ ಉಪಸ್ಥಿತರಿದ್ದರು. ಸಂಗೀತಾ ಎಮ್.ಕೆ ನಿರೂಪಿಸಿದರು. ಮೇಲ್ವಿಚಾರಕಿ ಶೈಲಾ ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿಗುಂಪುಗಳು, ಶಾಲಾ ವಿದ್ಯಾರ್ಥಿಗಳು,ಶಿಕ್ಷಕವೃಂದ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. 

 
 
 
 
 
 
 
 
 

Leave a Reply