ಹಿರಿಯ ನಾಗರೀಕರ ಮಾರ್ಗದರ್ಶನ ಸಮಾಜಕ್ಕೆ ಅವಶ್ಯಕ: ರಘುಪತಿ ಭಟ್

​ಉಡುಪಿ: ಹಿರಿಯ ನಾಗರಿಕರ ಮಾರ್ಗದರ್ಶನ, ಅನುಭವ  ಸಲಹೆ ಸೂಚನೆಗಳು ಸಮಾಜಕ್ಕೆ ಬಹಳ ಮುಖ್ಯ. ಆದ್ದರಿಂದ ಹಿರಿಯ ನಾಗರೀಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಮೊದಲ ಆದ್ಯತೆ ನೀಡಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದರು. ಅವರು ಗುರುವಾರ ಕುಂಜಿಬೆಟ್ಟು ಎಂ.ಜಿ.ಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಉಡುಪಿ, ಹಿರಿಯ ನಾಗರಿಕರ ಸಂಸ್ಥೆಗಳು ಉಡುಪಿ ಜಿಲ್ಲೆ, ಉಡುಪಿ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ, ವೃದ್ಧಾಶ್ರಮಗಳು ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದೊಂದಿಗೆ  ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೋವಿಡ್ ಸಂದರ್ಭದಲ್ಲಿ ಹಿರಿಯರು ಬಹಳ ಜಾಗರೂಕತೆಯಿಂದ ಇರಬೇಕು. ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಸದೃಢವಾಗಬೇಕು. ಕೋವಿಡ್19 ಕುರಿತ ಅಪಪ್ರಚಾರಗಳಿಗೆ ಕಿವಿಗೊಡದೆ, ಕೋವಿಡ್ ಲಕ್ಷಣ ವಿದ್ದಲ್ಲಿ, ಭಯ ಪಡದೆ ಪರೀಕ್ಷಿಸಿಕೊಳ್ಳಬೇಕು. ಇತ್ತೀಚಿಗೆ ಸಾರ್ವಜನಿಕರು ರೋಗ ಲಕ್ಷಣ ಗಳಿದ್ದರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳದೆ ಇರುವುದರಿಂದ  ಇತರರಿಗೂ ಹೆಚ್ಚಿನ ಸಂಖ್ಯೆಯಲ್ಲಿ ಹರಡುತ್ತಿದೆ. ಆದ್ದರಿಂದ ಹಿರಿಯರು ತಮ್ಮ ಮನೆಯಲ್ಲಿಯೇ ಸುರಕ್ಷಿತವಾಗಿದ್ದು ಮುಂಜಾಗೃತ ಕ್ರಮ ಕೈಗೊಂಡು ತಮ್ಮ ಆರೋಗ್ಯ ದತ್ತ ಗಮನ ಹರಿಸಬೇಕು ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,  ಹಿರಿಯ ನಾಗರಿಕರ ರಕ್ಷಣೆಗಾಗಿ ಹಲವು ಕಾನೂನುಗಳನ್ನು ರೂಪಿಸಿದ್ದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ  ಮೂಲಕ ಸಹಾಯವನ್ನು ನೀಡಲಾಗುತ್ತಿದೆ ಎಂದ ಅವರು,  ಹಿರಿಯ ನಾಗರಿಕರಿಗೆ ಇರುವ ಸೌಲಭ್ಯಗಳನ್ನು ಪಡೆಯಲು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಕುರಿತು ಮಾಹಿತಿಯನ್ನು ನೀಡಿದರು.ಈ ಸಂದರ್ಭದಲ್ಲಿ ಮಟ್ಟಾರು ರತ್ನಾಕರ ಹೆಗ್ಡೆ , ನಗರ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.

ಕಾರ‍್ಯಕ್ರಮದಲ್ಲಿ ವಿಶು ಶೆಟ್ಟಿ ಅಂಬಲಪಾಡಿ ಮತ್ತು ಪುಂಡಲಿಕ್ ಗಾಣಿಗ ಇವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ ವಾಸುದೇವ, ಕೋವಿಡ್19 ಬಗ್ಗೆ ಹಿರಿಯ ನಾಗರಿಕರು ತೆಗೆದುಕೊಳ್ಳಬೇಕಾದ ಮುಂಜಾಗೃತೆ ಕ್ರಮದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಿದರು.ಸೇವಾಸಿಂಧು ಜಿಲ್ಲಾ ವ್ಯವಸ್ಥಾಪಕ ಪ್ರಮೋದ್ ಎಸ್.ಆರ್, ಹಿರಿಯ ನಾಗರಿಕರ ಗುರುತಿನ ಚೀಟಿ, ಆನ್‌ಲೈನ್  ನೊಂದಣಿ ಬಗ್ಗೆ ಮಾಹಿತಿ ನೀಡಿದರು.

 
 
 
 
 
 
 
 
 
 
 

Leave a Reply