ಇಂಜಿನಿಯರಿಂಗ್ ಗೆ ಆಸರೆಯಾದ ಹೈನುಗಾರಿಕೆ.

ಗಂಡು ದಿಕ್ಕಿಲ್ಲದ ಕುಟುಂಬವೊಂದಕ್ಕೆ ಹೈನುಗಾರಿಕೆ ಆಸರೆಯಾಗಿ, ಹೆಣ್ಣು ಮಕ್ಕಳ ಭವಿಷ್ಯ ಒಂದು ಹಂತ ತಲುಪಲು ಸಹಕಾರಿಯಾಗಿದೆ. ನೀರೆ ಬೈಲೂರಿನ  ಸುಜಾತ ಪ್ರಭು ಮತ್ತು ದಿವಂಗತ ಸುಬ್ರಾಯ ಪ್ರಭು ದಂಪತಿಗೆ ನಾಲ್ವರು ಹೆಣ್ಣುಮಕ್ಕಳು. ಕ್ಯಾನ್ಸರ್ ಪೀಡಿತರಾಗಿದ್ದ ಸುಬ್ರಾಯ ಪ್ರಭುರವರು 2014ರಲ್ಲಿ ಕುಟುಂಬವನ್ನು ಅಗಲಿದ್ದಾರೆ.
ಹಿರಿಯ ಇಬ್ಬರು ಹೆಣ್ಣುಮಕ್ಕಳಿಗೆ ಶಿಕ್ಷಕಿ ಮತ್ತು ನರ್ಸಿಂಗ್ ಶಿಕ್ಷಣ ಪಡೆಯಲು ಈ ಕುಟುಂಬಕ್ಕೆ ಮಲ್ಲಿಗೆ ಕೃಷಿ ಮತ್ತು ಹೈನು ಗಾರಿಕೆ ಆಸರೆಯಾಗಿತ್ತು. ಮಾರ್ಚ್ ತಿಂಗಳಲ್ಲಿ ತಂದೆ ಮೃತಪಟ್ಟಾಗ ಕಿರಿಯ ಹೆಣ್ಣು ಮಕ್ಕಳು ಇಬ್ಬರು ಎಸೆಸೆಲ್ಸಿ ಮತ್ತು ಪಿಯುಸಿ ಅಂತಿಮ ಪರೀಕ್ಷೆ ಬರೆಯುತ್ತಿದ್ದರು. ಆಗ ತಾಯಿ ಮತ್ತು ಅಜ್ಜಿ ಕಂಗೆಡದೆ ಈ ಹೆಣ್ಣುಮಕ್ಕಳ ಭವಿಷ್ಯ ರೂಪಿಸಲು ಹಾಲು ಮಾರಿ ಇಬ್ಬರಿಗೂ ಇಂಜಿನಿಯರಿಂಗ್ ವಿದ್ಯಾಭ್ಯಾಸ ಸಿಗುವಂತೆ ಮಾಡಿದ್ದಾರೆ.
ತಂದೆಯ ಅಗಲಿಕೆಯ ಸಂಧರ್ಭ ಕಿರಿಯ ಹೆಣ್ಣುಮಕ್ಕಳಿಬ್ಬರು ಇಂಜಿನಿಯರಿಂಗ್ ವಿದ್ಯಾಭ್ಯಾಸ ಪಡೆಯುವ ಸಲುವಾಗಿ ಮನೆಯಿಂದ ದೂರವಿರಬೇಕಾದ ಅನಿವಾರ್ಯತೆ ಎದುರಾದಾಗ, ಮಲ್ಲಿಗೆ ಹೂವು ಕಟ್ಟಲು ಜನರಿಲ್ಲದ ಕಾರಣ ಈ ಕುಟುಂಬಕ್ಕೆ ಅನಿವಾರ್ಯವಾಗಿ ಮಲ್ಲಿಗೆ ಕೃಷಿಯನ್ನು ಕೈಬಿಡಬೇಕಾದ ಪರಿಸ್ಥಿತಿ ಬಂದೊದಗಿತ್ತು. ಆ ಬಳಿಕ ಕೇವಲ ಹೈನುಗಾರಿಕೆಯನ್ನೇ ಆಸರೆಯಾಗಿ ನಂಬಿದ ಈ ಕುಟುಂಬ ಇಬ್ಬರು ಹೆಣ್ಣುಮಕ್ಕಳನ್ನು ಇಂಜಿನಿಯರಿಂಗ್ ವಿದ್ಯಾಭ್ಯಾಸ ಪೂರೈಸುವಂತೆ ಮಾಡಿದೆ.
ತಂದೆ ನಿಧನರಾಗುವ ಮೊದಲೇ ಹಿರಿಯ ಇಬ್ಬರು ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆದಿದ್ದರೆ, ತಂದೆಯ ನಿಧನದ ಬಳಿಕ ತಾಯಿ ಸಂಸಾರದ ನೊಗ ಹೊತ್ತು ಇಬ್ಬರು ಕಿರಿಯ ಹೆಣ್ಣುಮಕ್ಕಳನ್ನು ಇಂಜಿನಿಯರಿಂಗ್ ಮಾಡಿದ್ದಾರೆ. ಅಶ್ವಿನಿ ಬೆಂಗಳೂ ರಿನ ಬಿಎಂಎಸ್ ಕಾಲೇಜಿನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಮಾಡಿದ್ದರೆ,  ಕೃತಿಕಾ ಸುಳ್ಯದ ಕೆವಿಜಿ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪೂರೈಸಿದ್ದಾರೆ. ಪ್ರತಿಭಾವಂತರಾಗಿದ್ದ ಇವರಿಗೆ ಸರಕಾರಿ ಸೀಟು ಲಭಿಸಿದ್ದರೂ ಹಾಸ್ಟೆಲ್ ಮತ್ತಿತರ ಶುಲ್ಕ ಸೇರಿ ಇಬ್ಬರಿಗೂ  ತಲಾ 6 ಲಕ್ಷ ರೂಪಾಯಿ ಖರ್ಚಾಗಿದೆ.
ನಾಲ್ಕೈದು ದನಗಳನ್ನೇ ಅವಲಂಬಿಸಿರುವ ಈ ಕುಟುಂಬ ಪ್ರತಿನಿತ್ಯ ಎರಡು ಕಿಲೋಮೀಟರ್ ದೂರ ನಡೆದುಕೊಂಡು ಹೋಗಿ ಡೈರಿಗೆ ಹಾಲು ಮಾರಿ ಕುಟುಂಬದ ನಿರ್ವಹಣೆ ಮಾಡುತ್ತಿದೆ.  ಗಂಡು ದಿಕ್ಕಿಲ್ಲದ ಈ ಕುಟುಂಬದಲ್ಲಿ ಸಂಸಾರದ ನೊಗ ಹೊರಲಾಗದೆ ಸೊರಗ ಬೇಕಾಗಿದ್ದ ಸಂದರ್ಭದಲ್ಲಿ ಅನಾರೋಗ್ಯವಿದ್ದರೂ ತಾಯಿ ಮತ್ತು ಅಜ್ಜಿ(ತಂದೆಯ ತಾಯಿ) ಸೇರಿ ಇಬ್ಬರು ಹೆಣ್ಣುಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಒಂದುವರೆ ವರ್ಷದ ಹಿಂದೆ ತಾಯಿಗೆ ಅನಾರೋಗ್ಯ ತೀವ್ರವಾಗಿ ಕೈಕೊಟ್ಟು ಆಸ್ಪತ್ರೆ ಸೇರಿದಾಗ ದನಗಳ ಪೋಷಣೆಗೂ ಕಷ್ಟವಾಗಿ ಕೊನೆಗೆ ಬೇರೆ ದಾರಿಯಿಲ್ಲದೆ ಈ ಕುಟುಂಬಕ್ಕೆ ಆಸರೆಯಾಗಿದ್ದ 5 ದನಗಳನ್ನೂ ಮಾರಿ, ಬಂದ ಹಣದಿಂದ ಈ ಇಬ್ಬರು ಹೆಣ್ಣುಮಕ್ಕಳ ಅಂತಿಮ ವರ್ಷದ ಸುಮಾರು 2 ಲಕ್ಷ ರೂಪಾಯಿ ಫೀಸು ಕಟ್ಟಿ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲಾಗಿದೆ. ಹೈನುಗಾರಿಕೆಯೊಂದೇ ಇವರ ಕುಟುಂಬಕ್ಕಿದ್ದ ಏಕೈಕ ಆಸರೆಯಾಗಿತ್ತು. ಈ ವರ್ಷವಷ್ಟೇ ಇಂಜಿನಿ ಯರಿಂಗ್ ಶಿಕ್ಷಣ ಪೂರೈಸಿದ ಕೊನೆಯ ಇಬ್ಬರು ಹೆಣ್ಣು ಮಕ್ಕಳು ಈಗ  ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ.

ಹಿರಿಯಳಾದ ಅಶ್ವಿನಿ ಈಗ ಉದ್ಯೋಗದ ನಿರೀಕ್ಷೆಯಲ್ಲಿದ್ದು, ಉದ್ಯೋಗ ದೊರೆತ ಮೇಲೆ ಕಷ್ಟಪಟ್ಟು ಇಂಜಿನಿಯರಿಂಗ್ ಶಿಕ್ಷಣ ನೀಡಿದ ತಾಯಿಯನ್ನು ಒಮ್ಮೆ ವಿಮಾನದಲ್ಲಿ ಕರೆದುಕೊಂಡು ಹೋಗುವ ಆಕಾಂಕ್ಷೆ ಹೊಂದಿದ್ದಾರೆ.. ಕಿರಿಯಳಾದ ಕೃತಿಕಾ ಉದ್ಯೋಗ ಪಡೆಯುವ ಜೊತೆಗೆ ವಿದ್ಯಾಭ್ಯಾಸವನ್ನು ಮುಂದುವರಿಸುವ ಆಕಾಂಕ್ಷೆ ಹೊಂದಿದ್ದು, ತನ್ನಂತೆಯೇ ಬಡ ಕುಟುಂಬದ ಪ್ರತಿಭಾವಂತ ಹೆಣ್ಣುಮಕ್ಕಳು ಉನ್ನತ ಶಿಕ್ಷಣವನ್ನು ಪಡೆಯಲು ಬಯಸಿದರೆ ಅವರಿಗೆ ಮಾರ್ಗದರ್ಶನ ನೀಡು ವುದರ ಜೊತೆಗೆ ಶಿಕ್ಷಣದ ಖರ್ಚನ್ನೂ ಭರಿಸುವುದಾಗಿ ತಿಳಿಸಿದ್ದಾರೆ.

ಮನಸಿದ್ದರೆ ಮಾರ್ಗ ಎಂಬ ಮಾತಂತೆ ಸಂಕಷ್ಟದ ಕಾಲದಲ್ಲಿ ಧೃತಿಗೆಡದ ಈ ಕುಟುಂಬಕ್ಕೆ ಹೈನುಗಾರಿಕೆಯಿಂದ ಜೀವನ ಕಂಡುಕೊಳ್ಳಲು ಸಾಧ್ಯವಾಗಿದೆ… ಉನ್ನತ ಶಿಕ್ಷಣ ಪಡೆದ ಮಕ್ಕಳಿಬ್ಬರೂ ಕೆಲಸ ಸಿಕ್ಕಿದ ಬಳಿಕ ಕಿಂಚಿತ್ ರೂಪದಲ್ಲಾದರೂ ತಾಯಿಯ ಋಣ ತೀರಿಸಲು ಬಯಸಿದ್ದಾರೆ… ಕೊರೋನಾದ ಸಂಕಷ್ಟ ಕಾಲದಲ್ಲಿ ಇವರ ಆಶಯಗಳು ಈಡೇರುವುದೇ ಎಂಬುದನ್ನ ಕಾದುನೋಡಬೇಕಾಗಿದೆ.

 
 
 
 
 
 
 
 
 
 
 

Leave a Reply