ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ವಿಚಾರದಲ್ಲಿ ಕಾಂಗ್ರೆಸ್ ನ ನಿಗೂಡ ಮೌನವೇಕೆ? : ಕುಯಿಲಾಡಿ ಸುರೇಶ್ ನಾಯಕ್

ಮಂಗಳೂರಿನ ಐಸಿಎಸ್ ಸಂಘಟನೆ ಸಂಪರ್ಕದಲ್ಲಿ ಮಂಗಳೂರಿನ ಉಳ್ಳಾಲದಲ್ಲಿ ಬಂಧನಕ್ಕೊಳಗಾದ ದೀಪ್ತಿ ಅಲಿಯಾಸ್ ಮರಿಯಂ ಹನಿಟ್ರ್ಯಾಪ್ ಮೂಲಕ ಹಿಂದೂ ಯುವಕರನ್ನು ಸೆಳೆದು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಸ್ಫೋಟಕ ವಿಚಾರ ರಾಷ್ಟ್ರೀಯ ತನಿಖಾ ದಳ ಎನ್ಐಎ ತನಿಖೆಯಲ್ಲಿ ಬೆಳಕಿಗೆ ಬಂದಿರುವುದು ಜಗಜ್ಜಾಹೀರಾಗಿದೆ. ಆದರೆ ಮತಾಂತರ ವಿರೋಧಿ ಕಾಯ್ದೆಗೆ ಅಡ್ಡಿಪಡಿಸಿರುವ ಕಾಂಗ್ರೆಸ್ ಈ ವಿಚಾರದಲ್ಲಿ ಮಾತ್ರ ನಿಗೂಡ ಮೌನ ವಹಿಸಿರುವುದು ಯಾಕೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಪ್ರಶ್ನಿಸಿದೆ.

ಮಡಿಕೇರಿ ಮೂಲದ ದೀಪ್ತಿ ಮೂಲತಃ ಹಿಂದೂ ಆಗಿದ್ದು ಮಂಗಳೂರಿನ ದೇರಳಕಟ್ಟೆಯಲ್ಲಿ ಬಿಡಿಎಸ್ ವ್ಯಾಸಂಗ ಸಂದರ್ಭದಲ್ಲಿ ಮಾಜಿ ಶಾಸಕ ಇದಿನಬ್ಬ ಅವರ ಮೊಮ್ಮಗ ಅನಾಸ್ ಅಬ್ದುಲ್ ರೆಹಮಾನ್ ಜೊತೆ ಪ್ರೀತಿಸಿ ಮದುವೆಯಾಗಿ ಇಸ್ಲಾಂಗೆ ಮತಾಂತರವಾಗಿದ್ದಳು ಹಾಗೂ ಈಕೆ ಕ್ರೋನಿಕಲ್ ಫೌಂಡೇಶನ್ ಎಂಬ ಇನ್ಸ್ಟಾಗ್ರಾಂ ಪೇಜ್ ನಲ್ಲಿ ಯುವಕರನ್ನು ಮತಾಂತರಕ್ಕೆ ಪ್ರೇರೇಪಿಸುತ್ತಿದ್ದು, ಬಳಿಕ ಮತಾಂತರಗೊಂಡ ಯುವಕರನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿಸುತ್ತಿದ್ದಳು ಎಂಬ ವಿಚಾರ ಎನ್ಐಎ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ ಎನ್ನಲಾಗಿದೆ.

ಮತಾಂತರವನ್ನು ಬೆಂಬಲಿಸುತ್ತಾ ಬಂದಿರುವ ಕಾಂಗ್ರೆಸ್, ಸದಾ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಸದನದಲ್ಲಿ ಮಾತ್ರ ಮತಾಂತರ ವಿರೋಧಿ ಕಾಯ್ದೆಯನ್ನು ವಿರೋಧಿಸಿ ನಕಲಿ ಜಾತ್ಯಾತೀತ ನಡೆ ಪ್ರದರ್ಶಿಸಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply