ಉಡುಪಿ: ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಸೈಂಟ್ ಮೇರಿಸ್ ಪಿಯು ಕಾಲೇಜಿನಲ್ಲಿ ನಡೆಯುತ್ತಿರುವ ಕೋವಿಡ್ ಲಸಿಕಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಜಿ ಜಗದೀಶ್ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿದರು.
ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಶಿರ್ವ ಗ್ರಾಮ ಪಂಚಾಯತ್ ವತಿಯಿಂದ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಯ ಮೂಲಕ ವ್ಯವಸ್ಥೆ ಮಾಡಲಾಗಿದೆ. 500 ಮೀಟರ್ ಅಂತರದಲ್ಲಿ ಯಾವುದೇ ವಾಹನಗಳು ಪೇಟೆಗೆ ಬರದಂತೆ ನಾಗರಿಕರಿಗೆ ಮನವಿ ಮಾಡಲಾಗಿದೆ.ಅಗತ್ಯ ವಸ್ತುಗಳಿಗೆ ನಿಗದಿತ ಸಮಯದಲ್ಲಿ ನಡೆದುಕೊಂಡು ಬಂದು ಖರೀದಿಸಲು ಮಾತ್ರ ಅವಕಾಶ ನೀಡಲಾಗಿದ್ದು,ಆರೋಗ್ಯ ಸಂಬಂಧಿತ ವಿಚಾರಗಳಿಗೆ ಮಾತ್ರ ವಾಹನ ಬಳಸಲು ಅವಕಾಶ ಮಾಡಲಾಗಿದೆ ಎಂದು ಪಂಚಾಯತ್ ಅಧ್ಯಕ್ಷ ಕೆ. ಆರ್ ಪಾಟ್ಕರ್ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.
ಇದೇ ವೇಳೆ ಕೋವಿಡ್ ಲಸಿಕೆ ವಿತರಣೆಯ ವ್ಯವಸ್ಥೆ ಪರಿಶೀಲನೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು, ಇಂದು ಶಿರ್ವ ಲಸಿಕಾ ಕೇಂದ್ರದಲ್ಲಿ ಒಟ್ಟು 200 ಮಂದಿಕೆ ಲಸಿಕೆಗೆ ಅವಕಾಶ ಮಾಡಲಾಗಿದೆ. ಶಾಲಾ ಆವರಣದಲ್ಲಿ ಮಾಡುತ್ತಿರುವುದರಿಂದ ಸಂಪೂರ್ಣವಾಗಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಲಸಿಕೆ ಪಡೆಯಲು ಬಂದ ಸಾರ್ವಜನಿಕರು ಗುಂಪಾಗಿ ಸೇರಿ ಇಲ್ಲಿಂದ ವಾಪಾಸಾಗುವಾಗ ಕೋರೊನಾವನ್ನು ಮನೆಗೆ ಕೊಂಡೊಯ್ಯಬೇಡಿ ಬದಲಾಗಿ ಸಾಮಾಜಿಕ ಅಂತರವನ್ನು ಕಾಪಾಡಿ ಎಚ್ಚರಿಕೆ ವಹಿಸಿ ಎಂದು ತಿಳಿಸಿದರು.